ಉದ್ಯಮಿಯಿಂದ ನಾಗಾಲ್ಯಾಂಡ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪ

ಬೆಂಗಳೂರು, ಮಾ.16: ಕೆಲಸ ಕೊಡಿಸುವುದಾಗಿ ನಾಗಾಲ್ಯಾಂಡ್ ಯುವತಿಯನ್ನು ಕರೆತಂದು ವಂಚಿಸಿದ ವ್ಯಕ್ತಿಯೊಬ್ಬ, ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಾಹೆಂಗ್ ಬಾಮ್ ಲಲಿತ್ ಎಂಬಾತನೇ ಲೈಂಗಿಕ ಕಿರುಕುಳ ನೀಡಿದ ಆರೋಪಿ ಎನ್ನಲಾಗಿದ್ದು, 2 ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಪರಿಚಯಿಸಿಕೊಂಡ ಲಲಿತ್, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಮನೆಯಲ್ಲಿರಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಕೆಲಸ ಹುಡುಕಿಕೊಂಡು 2015 ರ ಮೇನಲ್ಲಿ ನಗರಕ್ಕೆ ಬಂದಿದ್ದ 26 ವರ್ಷದ ಯುವತಿಗೆ ಎಚ್‌ಎಸ್‌ಆರ್ ಲೇಔಟ್ ನಿವಾಸಿ ರಾಂಗ್ ಸೇನಕಲ್ ಎಂಬಾಕೆಯ ಪರಿಚಯವಾಗಿತ್ತು. ಬ್ಯೂಟಿ ಪಾರ್ಲರ್‌ನಲ್ಲೆ ಕೆಲಸ ಕೊಡಿಸುತ್ತೇನೆ ಸ್ವಲ್ಪದಿನ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿರು ಎಂದು ಹೇಳಿದ್ದರು. ಮನೆಯಲ್ಲಿ ಆಕೆಯ ಪತಿ ವಹಾಂಗ್ ಬಮ್ ಲಲಿತ ಸಿಂಗ್ ಹಾಗೂ ಇಬ್ಬರು ಮಕ್ಕಳು ವಾಸವಿದ್ದರು. ಅಲ್ಲಿ ಕೆಲಸಕ್ಕಿದ್ದ ಯುವತಿಯು ಪ್ರತ್ಯೇಕ ಕೊಠಡಿಯಲ್ಲಿ ವಾಸವಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕೆಲಸ ಕೊಡಿಸದೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ, ಇದುವರೆಗೂ ದಂಪತಿಯನ್ನು ಬಂಧಿಸಿಲ್ಲ ಎಂದು ನೊಂದ ಯುವತಿ ತಮ್ಮ ಸಂಬಂಧಿಕರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಅದಾದ ನಂತರ ಆಕೆ ನಾಗಲ್ಯಾಂಡ್‌ಗೆ ತೆರಳಿದ್ದರು. ನಂತರ ಮಹಿಳಾ ಹಕ್ಕು ಸಂಘಟನೆಗೆ ದೂರು ನೀಡಿದ್ದರು. ಅವರು ವಿವೇಕನಗರ ಪೊಲೀಸ್ ಠಾಣೆಗೆ ದೂರು ವರ್ಗಾಯಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಯುವತಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾಳೆ. ಜೊತೆಗೆ ಮನೆ ಕೆಲಸ ಮಾಡಿಸಿಕೊಂಡ ದಂಪತಿ ಯುವತಿಗೆ ಆರು ತಿಂಗಳ ಸಂಬಳ ಕೂಡ ನೀಡಿಲ್ಲ ಎಂದು ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.







