ಕುಕ್ಕೆಹಳ್ಳಿ: ಮಾ.19ಕ್ಕೆ ಫಿಶ್‌ಮಿಲ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಉಡುಪಿ, ಮಾ.16: ಕುಕ್ಕೆಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಸುಮಾರು 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮೀನು ಸಂಸ್ಕರಣಾ ಘಟಕದಿಂದ ಕುಕ್ಕೆಹಳ್ಳಿ ಹಾಗೂ ಆಸುಪಾಸಿನ ಗ್ರಾಮಗಳ ಜನರ ನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಇದರ ವಿರುದ್ಧ ಇದೇ ಮಾ.19ರ ಸೋಮವಾರ ಇಡೀ ದಿನ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುಕ್ಕೆಹಳ್ಳಿ ಚೋಳೇಬೆಟ್ಟು ನಿವಾಸಿ ಸಂಜೀವ ನಾಯ್ಕ್ ತಿಳಿಸಿದ್ದಾರೆ.
ಅಖಿಲ ಕರ್ನಾಟಕ ನೆಲಜಲ ಪರಿಸರ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ, ಕುಕ್ಕೆಹಳ್ಳಿ ಪರಿಸರದ ಗ್ರಾಮಸ್ಥರು ಇಂದಿಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಕುಕ್ಕೆಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರಾವಳಿ ಫ್ರಿಜರ್ ಹಾಗೂ ಎಕ್ಸ್‌ಪೋರ್ಟ್ ಕಂಪೆನಿಯು ಹೊರಹಾಕುತ್ತಿರುವ ತ್ಯಾಜ್ಯದಿಂದ ಆಸುಪಾಸಿನ ಬಾವಿಗಳು ಹಾಗೂ ಮಡಿಸಾಲು ಹೊಳೆ ಕಲುಷಿತಗೊಂಡಿದ್ದು, ಇದು ಕುಡಿಯಲು ಅಯೋಗ್ಯವಾಗಿದೆ ಎಂಬುದು ವೈಜ್ಞಾನಿಕ ಪರೀಕ್ಷೆಗಳಿಂದ ದನಢಪಟ್ಟಿದೆ ಎಂದು ಅವರು ತಿಳಿಸಿದರು.
ಇದರಿಂದ ಕುಕ್ಕೆಹಳ್ಳಿ ಗ್ರಾಪಂ ವ್ಯಾಪ್ತಿಯ ಪುಣ್ಚೂರು, ಕಂಬಳಮಜಲು, ಚೋಳೆಬೆಟ್ಟು, ಚೇರ್ಕಾಡಿ ಗ್ರಾಪಂ ವ್ಯಾಪ್ತಿಯ ಬಾಯರ್‌ಬೆಟ್ಟು ಗ್ರಾಮ ಹಾಗೂ ನೀಲಾವರದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತಿದ್ದಾರೆ. ಈ ಫಿಶ್‌ಮಿಲ್ ಗ್ರಾಪಂನಿಂದ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಳಿದರೆ ನಾವು ತಾಪಂನಿಂದ ನೇರವಾಗಿ ಪರವಾನಿಗೆ ಪಡೆದಿದ್ದೇವೆ ಎಂದು ಹೇಳುತಿದ್ದಾರೆ ಎಂದು ದೂರಿದರು.
ಇದರಿಂದ ಸಂಕಷ್ಟಕೊಳ್ಳಗಾದ ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ದೂರಿಗೆ, ಬೇಡಿಕೆಗೆ ಯಾವುದೇ ರೀತಿಯ ನ್ಯಾಯ ದೊರಕಿಲ್ಲ. ಇಷ್ಟು ಸಾಲದೆಂಬಂತೆ ಈಗ ಮತ್ತೊಂದು ಫಿಶ್‌ಮಿಲ್‌ನ್ನು ತೆರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಸಂಜೀವ ನಾಯ್ಕಿ ತಿಳಿಸಿದರು.
ಕುಕ್ಕೆಹಳ್ಳಿಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಜಾತಿಯ ಅತ್ಯಧಿಕ ಮನೆಗಳಿರುವ ಪ್ರದೇಶದಲ್ಲೇ ಈ ಪಿಶ್‌ಮಿಲ್ ಕಾರ್ಯಾಚರಿಸುತ್ತಿದೆ. ಗ್ರಾಮಕ್ಕೆ ನೀರು ಪೂರೈಸುವ ಬಾವಿ ಇದಕ್ಕೆ ಸಮೀಪದಲ್ಲಿದ್ದು, ಮಾಲಿನ್ಯದಿಂದ ನೀರು ಕುಡಿಯಲು ಸಾಧ್ಯವಿಲ್ಲದಂತಾಗಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ನಮ್ಮ ದೂರಿಗೆ ಸ್ಪಂಧಿಸದೇ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತಿದ್ದಾರೆ. ಆಗಸ್ಟ್‌ನಿಂದ ಜನವರಿ ತಿಂಗಳವೆರೆಗೆ ಇಲ್ಲಿ ವಾಸನೆಯಿಂದ ರಾತ್ರಿ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲದಂತಾಗಿದೆ ಎಂದು ಪುಣ್ಚೂರಿನ ರಾಮಚಂದ್ರ ಭಟ್ ಹೇಳಿದರು.
ನಮ್ಮ ಸತತ ಬೇಡಿಕೆ, ದೂರಿಗೆ ಸ್ಪಂದನೆ ಸಿಗದ ಕಾರಣ ಇದೀಗ ಗ್ರಾಮಸ್ಥರು ಮಾ.19ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕುಕ್ಕೆಹಳ್ಳಿ ಗ್ರಾಪಂ ಎದುರು ಧರಣಿ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದೇವೆ ಎಂದರು. ನಂತರವೂ ನಮಗೆ ನ್ಯಾಯ ದೊರೆಯದಿದ್ದರೆ, ಮುಂದಿನ ಚುನಾವಣೆಯನ್ನೇ ಬಹಿಷ್ಕರಿಸಲೂ ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೆಲಜನ ಪರಿಸರ ಸಂರಕ್ಷಣಾ ಸಮಿತಿಯ ಲತಾ ಯು.ಶೆಟ್ಟಿ, ಅಂಬಲಪಾಡಿ ಉಮೇಶ್‌ಕುಮಾರ್, ಉದಯಕುಮಾರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಗೀತಾ ಉಪಸ್ಥಿತರಿದ್ದರು.







