ಬಿಯಂತ್ ಸಿಂಗ್ ಹತ್ಯೆ ಪ್ರಕರಣ: ಜಗ್ತಾರ್ ಸಿಂಗ್ ತಾರಾ ಅಪರಾಧಿ
ಮಾ.17ರಂದು ಶಿಕ್ಷೆಯ ಪ್ರಮಾಣ ಪ್ರಕಟ

ಚಂಡೀಗಡ, ಮಾ.16: ಇಲ್ಲಿನ ವಿಶೇಷ ನ್ಯಾಯಾಲಯವು ಮಾಜಿ ಮುಖ್ಯಮಂತ್ರಿ ಬಿಯಂತ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಜಗ್ತಾರ್ ಸಿಂಗ್ ತಾರಾ ಅಪರಾಧಿ ಎಂದು ತೀರ್ಪು ನೀಡಿದೆ. ತಾರಾಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಮಾ.17ರಂದು ಪ್ರಕಟಿಸಲಿದೆ. 1995ರ ಆಗಸ್ಟ್ 31ರಂದು ಪಂಜಾಬ್ ಮತ್ತು ಹರ್ಯಾಣದ ಸೆಕ್ರಟೇರಿಯೇಟ್ ಹೊರಗಡೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಬಿಯಂತ್ ಸಿಂಗ್ ಸಾವನ್ನಪ್ಪಿದ್ದರು. ಈ ಸ್ಫೋಟದಲ್ಲಿ ಪಂಜಾಬ್ ಪೊಲೀಸ್ ಪೇದೆ ದಿಲಾವರ್ ಸಿಂಗ್ ಆತ್ಮಾಹುತಿ ದಾಳಿಕೋರನಾಗಿದ್ದು, ಆತನೂ ಸೇರಿದಂತೆ 18 ಮಂದಿ ಬಲಿಯಾಗಿದ್ದರು. “ಬಿಯಂತ್ ಸಿಂಗ್‌ರನ್ನು ಹತ್ಯೆ ಮಾಡಿರುವುದಕ್ಕೆ ನನಗೆ ಯಾವ ಪಶ್ಚಾತ್ತಾಪವೂ ಇಲ್ಲ” ಎಂದು ಜನವರಿಯಲ್ಲಿ ನೀಡಿದ್ದ ಲಿಖಿತ ತಪ್ಪೊಪ್ಪಿಗೆ ಪತ್ರದಲ್ಲಿ ತಾರಾ ತಿಳಿಸಿದ್ದ. “ಮೈಕಲ್ ಒಡ್ವೈರ್‌ನನ್ನು ಹತ್ಯೆ ಮಾಡಿದ ಶಹೀದ್ ಉದಮ್ ಸಿಂಗ್ ಅವರೇ ನನಗೆ ಬಿಯಂತ್ ಸಿಂಗ್‌ರನ್ನು ಹತ್ಯೆ ಮಾಡಲು ಸ್ಫೂರ್ತಿ” ಎಂದು ತಾರಾ ತನ್ನ ಪತ್ರದಲ್ಲಿ ತಿಳಿಸಿದ್ದ. ಬಿಯಂತ್ ಹತ್ಯೆಗಾಗಿ ತಾನೇ ಕಾರನ್ನು ಖರೀದಿಸಿದ್ದು ನಾವೆಲ್ಲರೂ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೆವು ಎಂದು ತಾರಾ ತಪ್ಪೊಪ್ಪಿಗೆ ಪತ್ರದಲ್ಲಿ ತಿಳಿಸಿದ್ದ. ಸಿಖ್ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದ್ದು ಸಹಿಸಲು ಅಸಾಧ್ಯವಾಗಿದ್ದ ಪರಿಸ್ಥಿತಿಯಲ್ಲಿ ತಾರಾ, ಅನ್ಯಾಯವನ್ನು ಸಹಿಸಬಾರದು ಎಂದು ಭೋದಿಸುವ ಸಿಖ್ ಇತಿಹಾಸ ಮತ್ತು ಸಂಪ್ರದಾಯದಿಂದ ಪ್ರೇರೇಪಿತನಾಗಿ ಈ ಹತ್ಯೆಯನ್ನು ಮಾಡಿದ್ದಾನೆ ಎಂದು ತಾರಾ ಪರ ವಕೀಲರು ವಾದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಂತ್ ಸಿಂಗ್ ರಜೋನಾ ಎಂಬಾತ ಅಪರಾಧಿ ಎಂದು ನ್ಯಾಯಾಲಯ ಈ ಹಿಂದೆಯೇ ತೀರ್ಪು ನೀಡಿದೆ.





