ಶ್ರದ್ಧೆ, ಶ್ರಮ, ಮುಕ್ತ ಮನಸ್ಸಿದ್ದರೆ ವಿಕಾಸ ಸಾಧ್ಯ: ಪ್ರೊ.ಹಿ.ಶಿ.ರಾಮಚಂದ್ರೇಗೌಡ
ಮೈಸೂರು,ಮಾ.16: ಶ್ರದ್ಧೆ, ಶ್ರಮ, ಮುಕ್ತ ಮನಸ್ಸಿದ್ದರೆ ವಿಕಾಸ ಸಾಧ್ಯ ಎಂದು ಜಾನಪದ ತಜ್ಞ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ಕನ್ನಡ ಕ್ರಿಯಾ ವೇದಿಕೆ ವತಿಯಿಂದ ಕುವೆಂಪುನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ 'ಕನಕದಾಸರ ಪ್ರಸ್ತುತತೆ: ಯುವ ಸ್ಪಂದನ' ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
21ನೇ ಶತಮಾನದಲ್ಲಿದ್ದು ಕನಕದಾಸರನ್ನು ಅರ್ಥಮಾಡಿಕೊಳ್ಳದಿದ್ದರೆ ಪ್ರಗತಿಯಿಂದ ವಿಗತಿಯ ಕಡೆ ಹೋಗುತ್ತೇವೆ. ನಮ್ಮೆಲ್ಲಾ ಮನಸ್ಸುಗಳನ್ನು ಕೂಡ ಏಕರೂಪಕ್ಕೆ ತಂದು ಏಕರೀತಿಯಲ್ಲಿ ನಮ್ಮ ಮನಸ್ಸುಗಳನ್ನು ಇವತ್ತಿನ ಸಮಾಜ ಸ್ತಬ್ಧ ಮಾಡುತ್ತಿದೆ. ಇದರಲ್ಲಿ ರಾಜಕೀಯದ ಪಾತ್ರ ದೊಡ್ಡದು ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಸಂಸ್ಕೃತಿಯಲ್ಲಿ ನಾವು ಹುಡುಕಿಕೊಂಡು ಬಂದಿದ್ದು ಒಳ್ಳೆಯ ಮಾತುಗಳನ್ನು, ಒಳ್ಳೆಯ ಚಿಂತನೆಗಳನ್ನು. ನಾವು ಬೆಳಕನ್ನು ನೋಡಲು ಇಷ್ಟಪಡುತ್ತೇವೆಯೇ ಹೊರತು ಕತ್ತಲೆಯನ್ನಲ್ಲ. ಮುನ್ನಡೆಯನ್ನು ನೋಡಬೇಕು. ಅಭಿವೃದ್ಧಿಯ ಬಗ್ಗೆ ಯೋಚಿಸಬೇಕು. ಅದನ್ನು ಬಿಟ್ಟು 10ನೇ ಶತಮಾನಕ್ಕೆ, ಒಂದನೇ ಶತಮಾನಕ್ಕೆ ಹೋಗಿ ಆದಿಮಾನವನಂತೆ ಬದುಕುತ್ತೇವೆ ಎಂದರೆ ಬದುಕಿದ್ದೂ ಸತ್ತಂತೆ. ಅಂತಹ ಪರಿಸ್ಥಿತಿಯನ್ನು ಇಂದಿನ ರಾಜಕಾರಣಿಗಳು, ಧರ್ಮ ಚಿಂತಕರು ತರುತ್ತಿದ್ದಾರೆ ಎಂದು ಹೇಳಿದರು.
ಧರ್ಮ ರಿವೈವ್ ಆಗಬೇಕು. ಈಗಿರುವ ಧರ್ಮ ತಂತ್ರಜ್ಞಾನದ ಜೊತೆಗಿರುವ ಧರ್ಮವೇ, ಹೊರತು ಕೋಣೆಯೊಳಗೆ ಇರಬೇಕಾದ ಧರ್ಮವಲ್ಲ. ಸಮಾಜದ ಕುರಿತು ಯೋಚಿಸುವವರಾಗಬೇಕು. ಜನರ ಜೊತೆ ಬೆರೆಯುವವರಾಗಬೇಕು. ಒಂದು ಕಾಲದಲ್ಲಿ ಕನಕದಾಸರು ಬರಿಗಾಲ ಕವಿಯಾಗಿದ್ದರು. ದಂಡನಾಯಕರಾಗಿದ್ದರು. ಪದವಿ ಬಿಟ್ಟು ಕನಕ ಸಿಕ್ಕಾಗ ದಾನ ಮಾಡಿ ತಂಬೂರಿ ಹಿಡಿದರು. ಒಬ್ಬ ಮನುಷ್ಯ ತನ್ನ ಮೂಲನೆಲೆಯಿಂದ ಚಿಮ್ಮಬೇಕು. ಚಿಮ್ಮಿದರೆ ಮಾತ್ರ ಮುಂದಿನ ನಡೆ ಎಂಬುದನ್ನು ತೋರಿಸಿಕೊಟ್ಟರು. ಯಾರೂ ಕೀಳಲ್ಲ. ಚಿಕ್ಕವರಲ್ಲ. ಪ್ರಯತ್ನದ ಮೂಲಕ, ಶ್ರದ್ಧೆಯ ಮೂಲಕ ದೊಡ್ಡವರಾಗಿ ಬೆಳೆಯಬಹುದು ಎಂದರು.
ಗುಲಾಮಗಿರಿ ಹೊಂದುವುದು ದಾಸತ್ವವಲ್ಲ. ವಿಕಾಸ ಹೊಂದುವುದು. ಕನಕದಾಸರು ಧರ್ಮವನ್ನು ಹುಡುಕಿ ಹೋಗಿ ಅದರಲ್ಲಿರುವ ಮಿತಿಗಳನ್ನು ಕಂಡು ಹಿಡಿದರು. ಸಮಾನತಾ ಸಮಾಜಕ್ಕೆ ಶ್ರಮಿಸಿದರು. ಭಕ್ತಿ ಗುಲಾಮಗಿರಿಗಲ್ಲ. ಭಕ್ತಿ ಕೂಡ ವಿಕಾಸದ ಮಾರ್ಗ, ಭಕ್ತಿಯ ಮೂಲಕವೇ ಚಳುವಳಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟರು. ಭಕ್ತಿಯಿಂದ ಜನರ ವಿಕಾಸ ಸಾಧ್ಯವಿದೆ. ಇಡೀ ರಾಜ್ಯ, ದೇಶ ಸುತ್ತಿ ಸಮಾನತೆಯ ತತ್ವವನ್ನು ಸಾರಿದರು. ಶ್ರದ್ಧೆ,ಶ್ರಮ, ಮುಕ್ತ ಮನಸ್ಸಿದ್ದರೆ ವಿಕಾಸ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆಡಾ.ಎನ್.ರಾಗಿಣಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಹೆಚ್.ಉದಯಶಂಕರ್, ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ, ಸಂಚಾಲಕಿ ಡಾ.ಹೆಚ್.ಪಿ.ಗೀತಾ ಮತ್ತಿತರರು ಉಪಸ್ಥಿತರಿದ್ದರು.







