ಬಂಧನ ವಿರುದ್ಧ ರಕ್ಷಣೆ ಕೋರಿ ಗೋರ್ಖಾ ನಾಯಕ ಸಲ್ಲಿಸಿದ್ದ ಅರ್ಜಿ ವಜಾ

ಹೊಸದಿಲ್ಲಿ, ಮಾ.16: ಪಶ್ಚಿಮ ಬಂಗಾಳದಲ್ಲಿ ತನ್ನ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತನ್ನ ಬಂಧನದ ವಿರುದ್ಧ ರಕ್ಷಣೆಯನ್ನು ಕೋರಿ ಮತ್ತು ರಾಜ್ಯದಲ್ಲಿ ನಡೆದಿರುವ ಗೋರ್ಖಾಲ್ಯಾಂಡ್ ಹೋರಾಟಗಾರರ ಹತ್ಯೆಯ ಸ್ವತಂತ್ರ ತನಿಖೆಯನ್ನು ಕೋರಿ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ)ದ ನಾಯಕ ಬಿಮಲ್ ಗುರುಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಈ ಪ್ರಕರಣಗಳಲ್ಲಿ ಬಂಧನದ ವಿರುದ್ಧ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಾಧೀಶ ಎ.ಕೆ ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವು ಜಿಜೆಎಂ ನಾಯಕನ ಮನವಿಯನ್ನು ತಿರಸ್ಕರಿಸಿದೆ. ಬಿಮಲ್ ಗುರುಂಗ್ ವಿರುದ್ಧ ಯಾವುದೇ ರೀತಿಯ ದಬ್ಬಾಳಿಕೆಯ ಕ್ರಮವನ್ನು ಅನುಸರಿಸದಿರುವಂತೆ ಶ್ರೇಷ್ಠ ನ್ಯಾಯಾಲಯವು ನವೆಂಬರ್ 20ರಂದು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಸೂಚಿಸಿತ್ತು. ತನ್ನನ್ನು ಪ.ಬಂಗಾಳ ಸರಕಾರವು ರಾಜಕೀಯವಗಿ ಹಣಿಯಲು ಪ್ರಯತ್ನಿಸುತ್ತಿದೆ ಎಂದು ಗುರುಂಗ್ ನ್ಯಾಯಾಲಯದಲ್ಲಿ ಆರೋಪಿಸಿದ್ದರು.
ಮಮತಾ ಬ್ಯಾನರ್ಜಿ ಸರಕಾರವು ಗುರುಂಗ್ ವಿರುದ್ಧ ದಾಖಲಾಗಿರುವ 53 ಪ್ರಕರಣಗಳ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು ಮತ್ತು ಇನ್ನೂ 24 ಪ್ರಕರಣಗಳಲ್ಲಿ ಗುರುಂಗ್ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿತ್ತು. ಇತ್ತೀಚೆಗಷ್ಟೇ ಜಿಜೆಎಂ ಕೇಂದ್ರ ಸಮಿತಿಯು ಗುರುಂಗ್‌ರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ ಆ ಸ್ಥಾನಕ್ಕೆ ಬಿನಯ್ ತಮಂಗ್ ಅವರನ್ನು ನೇಮಕ ಮಾಡಿತ್ತು. ಪ್ರತ್ಯೇಕ ಗೋರ್ಖಾಲ್ಯಾಂಡ್‌ಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಗುರುಂಗ್ ಮತ್ತವರ ಸಹಚರರು ಡಾರ್ಜಿಲಿಂಗ್‌ನಲ್ಲಿ ಹಿಂಸಾಚಾರದಲ್ಲಿ ತೊಡಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುಂಗ್ ಮತ್ತಿತರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ ದೂರು ದಾಖಲಿಸಿದ್ದರು. ಈ ಘಟನೆಯ ನಂತರ ಗುರುಂಗ್ ಹಾಗೂ ಇತರ ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದರು.







