ಪ್ರತಿ ಗಂಟೆಗೆ ಭಾರತೀಯ ಬ್ಯಾಂಕ್‌ಗಳು ಕಳೆದುಕೊಳ್ಳುತ್ತಿರುವುದು ಎಷ್ಟು ಕೋಟಿ ರೂ.ಗಳನ್ನು ಗೊತ್ತಾ?

ಬೆಂಗಳೂರು, ಮಾ.16: ಭಾರತೀಯ ಬ್ಯಾಂಕ್‌ಗಳು ಪ್ರತಿಗಂಟೆಗೆ 1.6 ಕೋಟಿ ರೂ. ಕಳೆದುಕೊಳ್ಳುತ್ತಿವೆ. ಇದಕ್ಕೆ ಕಾರಣ ಮೋಸ ಮಾಡುವ ಅತ್ಯಂತ ಹಳೆಯ ವಿಧಾನಗಳಾದ ವಂಚನೆ ಎಂದು ಆರ್‌ಬಿಐ ವರದಿಯು ತಿಳಿಸಿದೆ. ಬ್ಯಾಂಕ್‌ಗಳು ಸಮಾನವಾಗಿ ವರದಿ ಮಾಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ವಂಚನೆಗಳನ್ನು ಎಂಟು ವಿಭಾಗಗಳಾಗಿ ಗುರುತಿಸಿದೆ. ಈ ಪೈಕಿ ನಕಲಿ ದಾಖಲು ಸೃಷ್ಟಿಸಿ ಮಾಡಲಾದ ವಂಚನೆಯೇ 2014-15, 2015-16 ಮತ್ತು 2016-17ರ ಮೂರು ವರ್ಷಗಳಲ್ಲಿ 42,276 ಕೋಟಿ ರೂ ಆಗಿದೆ ಎಂದು ವರದಿ ತಿಳಿಸಿದೆ.
ತರಬೇತಿ, ಭದ್ರತಾ ರೂಪುರೇಷೆ ಮತ್ತು ಒಟ್ಟಾರೆ ವ್ಯವಸ್ಥೆಯ ಕೊರತೆಯ ಪರಿಣಾಮವಾಗಿ ವ್ಯವಸ್ಥೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಸಾಮರ್ಥ್ಯತೆ ಉಂಟಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಕಲಿ ದಾಖಲೆ ಮತ್ತು ವಂಚನೆಯಿಂದ ಬ್ಯಾಂಕ್‌ಗಳು ಕಳೆದುಕೊಂಡಿರುವ 42,276 ಕೋಟಿ ರೂ. ಮೊತ್ತದಲ್ಲಿ ಶೇ. 89 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕಳೆದುಕೊಂಡಿದ್ದರೆ, ಉಳಿದ ಮೊತ್ತವನ್ನು ಖಾಸಗಿ ಬ್ಯಾಂಕ್‌ಗಳು ಕಳೆದುಕೊಂಡಿವೆ. ಈ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ ಅತೀಹೆಚ್ಚು ಅಂದರೆ 5,743 ಕೋಟಿ ರೂ. ನಷ್ಟ ಅನುಭವಿಸಿದೆ.
ಒಟ್ಟು 7,505 ಪ್ರಕರಣಗಳಲ್ಲಿ ಬ್ಯಾಂಕ್‌ಗಳು ಹಣವನ್ನು ಕಳೆದುಕೊಂಡಿದ್ದು, ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 4,702 ಪ್ರಕರಣಗಳು ದಾಖಲಾಗಿದ್ದರೆ 2,803 ಪ್ರಕರಣಗಳು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಪತ್ತೆಯಾಗಿವೆ. ಇಷ್ಟು ಬೃಹತ್ ಮೊಟ್ಟದ ಮೋಸವು ಬ್ಯಾಂಕ್ ಸಿಬ್ಬಂದಿಯ ಸಹಾಯವಿಲ್ಲದೆ ನಡೆಯಲು ಸಾಧ್ಯವಿಲ್ಲ. ಇವುಗಳೆಲ್ಲ ವ್ಯವಸ್ಥಿತವಾಗಿ ನಡೆಸಲಾಗಿರುವ ವಂಚನೆಗಳು. ಹಾಗಾಗಿ ವ್ಯವಸ್ಥೆಯನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ವರದಿ ಸಲಹೆ ನೀಡಿದೆ.