ಚಿಕ್ಕಮಗಳೂರು: ಲಾರಿ ಪಾರ್ಕಿಂಗ್ ಜಾಗದಲ್ಲಿ ಕಸಾಯಿಕಾನೆ ನಿರ್ಮಾಣಕ್ಕೆ ತಯಾರಿ; ಆರೋಪ

ಚಿಕ್ಕಮಗಳೂರು. ಮಾ.16: ನಗರದ ಸಂತೆ ಮೈದಾನದಲ್ಲಿರುವ ಲಾರಿ ಪಾರ್ಕಿಂಗ್ ಜಾಗದಲ್ಲಿ ಕಸಾಯಿಖಾನೆ ನಿರ್ಮಾಣ ಮಾಡಲು ಮುಂದಾಗಿರುವ ನಗರಸಭೆಯ ಕ್ರಮಕ್ಕೆ ಲಾರಿ ಮಾಲಕರ ಸಂಘ ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾರ್ಕೆಟ್ ರಸ್ತೆಯಲ್ಲಿದ್ದ ಕಸಾಯಿಖಾನೆಯನ್ನು ಸಂತೆಮೈದಾನದ ಬಳಿಯಿರುವ ಲಾರಿ ಪಾರ್ಕಿಂಗ್ ಜಾಗಕ್ಕೆ ಸ್ಥಳಾಂತರಿಸಲು ನಗರಸಭೆ ನಿರ್ಧರಿಸಿದ್ದು, ಶುಕ್ರವಾರ ಬೆಳಗ್ಗೆ ಕಸಾಯಿಖಾನೆ ನಿರ್ಮಾಣಕ್ಕೆ ಮಾರ್ಕಿಂಗ್ ಮಾಡಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರು ಹಾಗೂ ಲಾರಿ ಮಾಲಕರ ಸಂಘದ ಸದಸ್ಯರು, 'ಹರ್ಷಗುಪ್ತರವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಈ ಸ್ಥಳವನ್ನು ಲಾರಿ ಪಾರ್ಕಿಂಗ್‍ಗೆ ನೀಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಈ ಸ್ಥಳದಲ್ಲೇ ಲಾರಿ ಪಾರ್ಕಿಂಗ್ ವ್ಯವಸ್ಥೆ ಮುಂದುವರಿದಿದೆ. ಆದರೆ ನಗರಸಭೆ ಆಡಳಿತ ಏಕಾಏಕಿ ಈ ಸ್ಥಳದಲ್ಲಿ ಕಸಾಯಿಖಾನೆಗೆ ಕಟ್ಟಡ ನಿರ್ಮಿಸಲು ಮುಂದಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೀಡಾಗಿದ್ದು, ಜೊತೆಗೆ ಲಾರಿ ಮಾಲಕರಿಗೆ ಸ್ಥಳವಿಲ್ಲದಂತಾಗಿದೆ. ನಗರಸಭೆ ಕಸಾಯಿಖಾನೆ ನಿರ್ಮಾಣಕ್ಕೂ ಮೊದಲು ಲಾರಿ ಮಾಲಕರಿಗೆ ಪರ್ಯಾಯ ಜಾಗ ಗುರುತಿಸಬೇಕು. ಜೊತೆಗೆ ಸ್ಥಳೀಯ ನಿವಾಸಿಗಳಿಗೆ ಇದರಿಂದ ಆರೋಗ್ಯದ ಮೇಲೆ ಬೀಳುವ ಪರಿಣಾಮದ ಬಗ್ಗೆ ಎಚ್ಚರ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರಸಭಾ ಸದಸ್ಯ ಹಾಗೂ ಪ್ರದೇಶ ಕಾಂಗ್ರೆಸ್ ಕಿಸಾನ್ ಸೆಲ್‍ನ ರಾಜ್ಯ ಸಂಚಾಲಕ ಸಿ.ಎನ್. ಅಕ್ಮಲ್, ಲಾರಿ ಮಾಲಕರೊಂದಿಗೆ ಮಾತುಕತೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಸಾಯಿಖಾನೆ ನಿರ್ಮಾಣದ ನಿರ್ಧಾರವನ್ನು ನಗರಸಭೆ ಕೂಡಲೇ ಕೈಬಿಡಬೇಕು. ಲಾರಿ ಮಾಲಕರಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ಕಸಾಯಿಖಾನೆ ನಿರ್ಮಾಣಕ್ಕೆ ಮಾರ್ಕಿಂಗ್ ಮಾಡಿರುವುದು ಕಾನೂನು ಬಾಹಿರ ಕೆಲಸವಾಗಿದೆ. ಕಸಾಯಿಖಾನೆ ನಿರ್ಮಾಣಕ್ಕೂ ಮೊದಲು ಲಾರಿ ಮಾಲಕರ ಸಂಘಕ್ಕೆ ಪರ್ಯಾಯ ಸ್ಥಳವನ್ನು ನೀಡಬೇಕು. ಸಂತೆ ಮೈದಾನದಲ್ಲಿ ಕಸಾಯಿಖಾನೆ ನಿರ್ಮಾಣ ಮಾಡುವುದರಿಂದ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಕಸಾಯಿಖಾನೆಯಿಂದ ಬರುವ ದುರ್ವಾಸನೆ ಮತ್ತು ತ್ಯಾಜ್ಯಗಳು ಸಂಗ್ರಹವಾಗಿ ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕಸಾಯಿಖಾನೆಯನ್ನು ನಗರದಿಂದ ಹೊರಗೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.







