ಬೆಂಗಳೂರು: ಚೆಕ್ ಪೋಸ್ಟ್‌ನಲ್ಲಿ ಅನಧಿಕೃತ ಹಣ ವಸೂಲಿ; ಬಂಧನ

ಬೆಂಗಳೂರು, ಮಾ.16: ವಿಜಯಪುರ ಜಿಲ್ಲೆಯ ಝಳಕಿಯಲ್ಲಿನ ಎಆರ್‌ಟಿಓ ಚೆಕ್ ಪೋಸ್ಟ್‌ನಲ್ಲಿ ಅನಧಿಕೃತವಾಗಿ ವಾಹನಗಳ ಚಾಲಕ ಮತ್ತು ಮಾಲಕರಿಂದ ಹಣ ಸಂಗ್ರಹ ಮಾಡುತ್ತಿದ್ದ ವಾಹನ ನಿರೀಕ್ಷಕ ಹಾಗೂ ಖಾಸಗಿ ಏಜೆಂಟರನ್ನು ಎಸಿಬಿ ಪೊಲೀಸರು ಬಂಧಿಸಿ, ದೂರು ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಮೋಟಾರ ವಾಹನ ನಿರೀಕ್ಷಕರು ಖಾಸಗಿ ಏಜಂಟರುಗಳ ಮುಖಾಂತರ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ವಾಹನ ನಿರೀಕ್ಷಕ ಎನ್.ರಂಜೀತ ಹಾಗೂ ಖಾಸಗಿ ಏಜಂಟರುಗಳು ಮತ್ತು ಗೃಹರಕ್ಷಕರಾದ ಸಂಜೀವಕುಮಾರ, ಸಾಯಬಣ್ಣ, ರಾಜು, ಶಾಲ, ಅನೀಲ, ದೇವದಾಸ (ಗೃಹರಕ್ಷಕ) ಮತ್ತು ಸೋಮನಿಂಗ (ಗೃಹರಕ್ಷಕ) ರನ್ನು ವಶಕ್ಕೆ ಪಡೆಯಲಾಗಿದೆ.
ಇವರು ಒಟ್ಟು 41,950 ರೂ.ಗಳು ಸಂಗ್ರಹಿಸಿದ್ದು, ಅದರಲ್ಲಿ 8,870 ರೂ.ಗಳಿಗೆ ರಶೀದಿ ನೀಡಿದ ಬಗ್ಗೆ ಮತ್ತು ರೂ.33,080 ರೂ.ಗಳಿಗೆ ಯಾವುದೇ ರಶೀದಿ ನೀಡದೆ ಅನಧಿಕೃತವಾಗಿ ಸಂಗ್ರಹಿಸಿದ್ದು ಕಂಡು ಬಂದಿದೆ. ಈ ಕೃತ್ಯವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಹಾಗೂ ತನಿಖೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಅಪರಾಧವೆಸಗಿದ್ದು ಮತ್ತು ರಾಜ್ಯ ಸರಕಾರಕ್ಕೆ ಸೇರಬೇಕಾದ ರಾಜಧನ ಲೋಪವಾಗುತ್ತಿರುವುದು ಕಂಡು ಬಂದಿರುತ್ತದೆ. ಹೀಗಾಗಿ, ಈ 8 ಜನರು ಅನಧಿಕೃತವಾಗಿ ಸಂಗ್ರಹಿಸಿದ್ದ ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







