'ಗುಬ್ಬಚ್ಚಿ ಗೂಡು' ಜಾಗೃತಿ ಕಾರ್ಯಗಾರ
.jpg)
ಬಂಟ್ವಾಳ, ಮಾ. 16: ಸಮಾಜದಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಪ್ರಾಣಿ ಮತ್ತು ಪಕ್ಷಿಗಳ ವಲಸೆ ತಪ್ಪಿಸುವ ಮೂಲಕ ಅವುಗಳಿಗೂ ನಮ್ಮಂತೆ ಬದುಕುವ ಹಕ್ಕಿದೆ ಎಂಬುದನ್ನು ಯುವ ಪೀಳಿಗೆಗೆ ತಿಳಿಸಬೇಕು. ಆ ಮೂಲಕ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗೆ ಸಸ್ಯ ರಾಶಿಗಳ ಮಹತ್ವ ತಿಳಿಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಶೆಟ್ಟಿ ಬೈದ್ಯಾರು ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ಸಮೀಪದ ಕಡ್ತಾಲಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ "ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗೆ ಸಸ್ಯರಾಶಿಗಳ ಮಹತ್ವ" ಎಂಬ ಬಗ್ಗೆ 'ಗುಬ್ಬಚ್ಚಿ ಗೂಡು' ಜಾಗೃತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾಶಿವ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಎಂ.ಕೇಶವಯ್ಯ ಮತ್ತು ಸಂಪನ್ಮೂಲ ವ್ಯಕ್ತಿ ರಮ್ಯಾ ಮಾತನಾಡಿದರು.
ಮುಖ್ಯಶಿಕ್ಷಕ ಎಂ. ರತ್ನಾಕರ ಭಟ್ ಪ್ರಾಸ್ತಾವಿಸಿ, ವಿದ್ಯಾರ್ಥಿನಿ ನಿಧಿ ಡಿ.ಶೆಟ್ಟಿ ಸ್ವಾಗತಿಸಿ, ಹರ್ಷಿತಾ ವಂದಿಸಿದರು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಶಾಲೆಯ ಆವರಣದಲ್ಲಿ ಮರಗಳಿಗೆ ಮಣ್ಣಿನ ಗುಬ್ಬಚ್ಚಿ ಗೂಡು ಮತ್ತು ಬುಡದಲ್ಲಿ ನೀರಿನ ಪಾತ್ರೆ ಮತ್ತಿತರ ಸಲಕರಣೆ ಅಳವಡಿಸಲಾಯಿತು.







