ತ್ರಿಕೋನ ಟ್ವೆಂಟಿ-20 ಸರಣಿ: ರೋಚಕ ಜಯ ಸಾಧಿಸಿದ ಬಾಂಗ್ಲಾದೇಶ ಫೈನಲ್‌ಗೆ

ಕೊಲಂಬೊ, ಮಾ.16: ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಸೆಮಿ ಫೈನಲ್ ಪಂದ್ಯವಾಗಿ ಪರಿವರ್ತಿತವಾಗಿರುವ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು 2 ವಿಕೆಟ್‌ನಿಂದ ರೋಚಕವಾಗಿ ಮಣಿಸಿದ ಬಾಂಗ್ಲಾದೇಶ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಬಾಂಗ್ಲಾದೇಶ ಮಾ.18 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 160 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ 19.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.
ಔಟಾಗದೆ 43 ರನ್(18 ಎಸೆತ, 3 ಬೌಂಡರಿ, 2 ಸಿಕ್ಸರ್)ಗಳಿಸಿದ ಮಹ್ಮುದುಲ್ಲಾ ಬಾಂಗ್ಲಾದೇಶದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಬಾಂಗ್ಲಾಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 12 ರನ್ ಅಗತ್ಯವಿತ್ತು. ಉಡಾನ ಎಸೆದ ಅಂತಿಮ ಓವರ್‌ನ ಎರಡನೇ ಎಸೆತದಲ್ಲಿ ಮುಸ್ತಫಿಝರ್ರಹ್ಮಾನ್(0)ರನೌಟಾದರು. 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಮಹ್ಮುದುಲ್ಲಾ 4ನೇ ಎಸೆತದಲ್ಲಿ 2 ರನ್ ಗಳಿಸಿದರು. 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಮಹ್ಮುದುಲ್ಲಾ ಇನ್ನೂ 1 ಎಸೆತ ಬಾಕಿ ಇರುವಾಗಲೇ ಬಾಂಗ್ಲಾಕ್ಕೆ ರೋಚಕ ಜಯ ತಂದರು.
ಆರಂಭಿಕ ಆಟಗಾರ ತಮೀಮ್ ಇಕ್ಬಾಲ್(50,42 ಎಸೆತ, 4 ಬೌಂಡರಿ, 2 ಸಿಕ್ಸರ್),ಮುಶ್ಫಿಕುರ್ರಹೀಂ(28,25 ಎಸೆತ)ತಂಡದ ಗೆಲುವಿಗೆ ನೆರವಾದರು. ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು







