ಭಟ್ಕಳ: ಬಂದರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
.jpg)
ಭಟ್ಕಳ,ಮಾ.16: ಇಲ್ಲಿನ ಬಂದರ್ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯಿಂದ ಶುಕ್ರವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಮಾನ್ವಿ, ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು. ಮಾತೃ ಶಿಕ್ಷಣ ಸಂಸ್ಥೆಯು ನಿಮಗೆ ಒಂದು ಸ್ವರೂಪವನ್ನು ನೀಡಿದ್ದು ಮುಂದೆ ನೀವು ಈ ಸಂಸ್ಥೆಯನ್ನು ಬೆಳೆಸುವಂತಹ ಕಾರ್ಯ ಮಾಡಬೇಕು. ಬದುಕಿನಲ್ಲಿ ಎಷ್ಟೆ ಕಷ್ಟ ಹಾಗೂ ಸಮಸ್ಯೆಗಳು ಎದುರಾದರೆ ಅದನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕರು ಹಾಗೂ ಶಿಕ್ಷಣ ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತಾರೆ. ನಾವು ಕಲಿತ ಶಿಕ್ಷಣ ಕೇವಲ ಹಣಗಳಿಕೆ ಮಾತ್ರವಲ್ಲದೆ ಅದು ಉತ್ತಮ ಬದುಕು ಬದುಕಲಿಕ್ಕೆ ಸಹಕಾರಿಯಾದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ, ಪೋಷಕರನ್ನು ಗೌರವದಿಂದ ಕಾಣುವುದರ ಮೂಲಕ ನಾವು ಅವರ ಸೇವೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯಾದ್ಯಾಪಕಿ ಶ್ರೀಮತಿ ಮಮತಾ ವಾಡೆಕರ್ ಮಾತನಾಡಿ, ಒಂದನೆ ತರಗತಿಯಿಂದ 7ನೇ ತರಗತಿಯವರಿಗೆ ಶಿಕ್ಷಣ ಪಡೆದು ಈಗ ಬೇರೆ ಹೈಸ್ಕೂಲ್ ಗೆ ಹೋಗುತ್ತಿರುವ ವಿದ್ಯಾರ್ಥಿಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಉತ್ತಮ ಶಿಕ್ಷಣ ಪಡೆಯುವಂತೆ ಕರೆ ನೀಡಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದರು. ಹಿರಿಯ ಶಿಕ್ಷಕ ಪಾಂಡುರಂಗ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕ ತಿಮ್ಮಪ್ಪ ಡಿ.ಗೊಂಡ ಧನ್ಯವಾದ ಅರ್ಪಿಸಿದರು. ರತ್ನಾಕರ್ ಖಾರ್ವಿ, ಕೃಷ್ಣ ಖಾರ್ವಿ, ಯುವಕ ಸಂಘದ ಅಧ್ಯಕ್ಷ ರಾಮ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.







