ಯುನಿವರ್ಸಿಟಿ ಶೂಟಿಂಗ್ ಚಾಂಪಿಯನ್‌ಶಿಪ್: ಚಿನ್ನಕ್ಕೆ ಗುರಿ ಇಟ್ಟ ಭಾರತದ ಶೂಟರ್ ತಂಡ

ಕೌಲಾಲಂಪುರ, ಮಾ.16: ವರ್ಲ್ಡ್ ಯುನಿವರ್ಸಿಟಿ ಶೂಟಿಂಗ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಪುರುಷರ 10ಮೀ. ಏರ್ ಪಿಸ್ತೂಲ್ ವಿಭಾಗದ ಟೀಮ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದೆ.
ಭಾರತದ ಅನ್ಮೋಲ್ ಜೈನ್, ಅಚಲ್ ಪ್ರತಾಪ್ ಸಿಂಗ್ ಗ್ರೆವಾಲ್ ಹಾಗೂ ನಿಶಾಂತ್ ಸಿಂಧು ಅವರನ್ನೊಳಗೊಂಡ ಪುರುಷರ ಶೂಟಿಂಗ್ ತಂಡ ಒಟ್ಟು 1725 ಅಂಕ ಗಳಿಸಿ ಚಿನ್ನ ಗೆದ್ದುಕೊಂಡಿದೆ. ಭಾರತದ ಭರವಸೆಯ ಶೂಟರ್‌ಗಳಾದ ಮೇಘನಾ ಸಜ್ಜನರ್ ಹಾಗೂ ಇಲಾವೆನಿಲ್ ವಲರಿವನ್ 10 ಮೀ. ಏರ್ ರೈಫಲ್ ವೈಯಕ್ತಿಕ ಪಂದ್ಯಾವಳಿಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಬೆಂಗಳೂರು ಮೂಲದ 24ರ ಹರೆಯದ ಮೇಘನಾ ಕಳೆದ ವರ್ಷ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ಸೀನಿಯರ್ ಶೂಟಿಂಗ್ ತಂಡವನ್ನು ಪ್ರತಿನಿಧಿಸಿದ ಕರ್ನಾಟಕದ ಮೊದಲ ಮಹಿಳಾ ಶೂಟರ್ ಎನಿಸಿಕೊಂಡಿದ್ದರು.
2016ರಲ್ಲಿ 75 ಶೇ. ಅಂಕಗಳೊಂದಿಗೆ ಜೈನ್ ಯುನಿವರ್ಸಿಟಿಯಿಂದ ಪದವಿ ಪಡೆದಿರುವ ಮೇಘನಾ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿದ್ದಾರೆ.
2016ರಲ್ಲಿ ನ್ಯಾಶನಲ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಐದನೇ ಹಾಗೂ ಟ್ರಯಲ್ಸ್‌ನಲ್ಲಿ ಮೊದಲ ಸ್ಥಾನ ಪಡೆಯುವುದರೊಂದಿಗೆ ತಂಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದರು.
ಗುಜರಾತ್ ಮೂಲದ ವಲಾರಿಯನ್ ಇನ್ನೋರ್ವ ಭರವಸೆಯ ಶೂಟರ್ ಆಗಿದ್ದು, 2017ರ ಡಿಸೆಂಬರ್‌ನಲ್ಲಿ 61ನೇ ಆವೃತ್ತಿಯ ನ್ಯಾಶನಲ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಇದೇ ವೇಳೆ, ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್‌ನಲ್ಲಿ ಚಿನ್ನದ ಪದಕ ವಿಜೇತ ಅಖಿಲ್ ಶೆರೊನ್ ಪುರುಷರ 50 ಮೀ. ರೈಫಲ್ ತ್ರಿ ಪೊಸಿಶನ್ಸ್ ಅರ್ಹತಾ ಸುತ್ತಿನಲ್ಲಿ 33ನೇ ಸ್ಥಾನ ಪಡೆಯುವುದರೊಂದಿಗೆ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
2018ರ ವರ್ಲ್ಡ್ ಯುನಿವರ್ಸಿಟಿ ಶೂಟಿಂಗ್ ಸ್ಪೋರ್ಟ್ ಚಾಂಪಿಯನ್‌ಶಿಪ್ ಮಾ.14 ರಿಂದ ಆರಂಭವಾಗಿದ್ದು ಮಾ.18ರ ತನಕ ನಡೆಯಲಿದೆ.







