ತನ್ನ ಕೊನೆಯ ಪಯಣದ ಮೊದಲ ದಿನ ಕಲ್ಪನಾ ಚಾವ್ಲಾ ಹೇಳಿದ್ದೇನು?
ಇಂದು ಕಲ್ಪನಾ ಹುಟ್ಟುಹಬ್ಬ
ಹೊಸದಿಲ್ಲಿ, ಮಾ.17: ಭಾರತೀಯ ಮೂಲದ ಪ್ರಥಮ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆ ಪಡೆದಿರುವ 'ಕಲ್ಪನಾ ಚಾವ್ಲಾ' ಅವರ ಜನ್ಮ ದಿನ ಮಾರ್ಚ್ 17. ಅವರು ಇಂದು ಬದುಕಿರುತ್ತಿದ್ದರೆ 56 ವರ್ಷಗಳಾಗುತ್ತಿತ್ತು. ಬಾಹ್ಯಾಕಾಶ ದುರಂತವೊಂದರಲ್ಲಿ ಮಡಿದು 15 ವರ್ಷಗಳ ನಂತರವೂ ಕಲ್ಪನಾ ಜಗತ್ತಿನಾದ್ಯಂತ ಲಕ್ಷಗಟ್ಟಲೆ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.
ಮಾರ್ಚ್ 17, 1962ರಂದು ಹರ್ಯಾಣದ ಕರ್ನಾಲ್ ಎಂಬಲ್ಲಿ ಜನಿಸಿದ್ದ ಕಲ್ಪನಾರನ್ನು ಎಲ್ಲರೂ 'ಮೊಂಟು' ಎಂದು ಅಕ್ಕರೆಯಿಂದ ಕರೆಯುತ್ತಿದ್ದರು. ಕರ್ನಾಲ್ ನಲ್ಲಿಯೇ ಶಾಲಾ ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಅವರು ಚಂಡೀಗಢದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಶಿಕ್ಷಣ ಪಡೆದು ನಂತರ ಟೆಕ್ಸಾಸ್ ವಿವಿಯಲ್ಲಿ ಸ್ನಾತ್ತಕೋತ್ತರ ಪದವಿ ಪಡೆಯಲು 1982ರಲ್ಲಿ ಅಮೆರಿಕಾಗೆ ತೆರಳಿದ್ದರು. ಕೊಲರಾಡೋ ವಿವಿಯಿಂದ ಅವರು ಪಿಎಚ್ ಡಿ ಪದವಿಯನ್ನೂ ಪಡೆದಿದ್ದರು.
ಶಿಕ್ಷಣ ಮುಗಿಸಿದ ನಂತರ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾ ಏಮ್ಸ್ ರಿಸರ್ಚ್ ಸೆಂಟರ್ ನಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಆರಂಭಿಸಿದ್ದರು. ಪಾಲೋ ಆಲ್ಟೋ ಫ್ಲೈಯಿಂಗ್ ಕ್ಲಬ್ ಮುಖಾಂತರ ಪೈಲಟ್/ಫ್ಲೈಟ್ ಇನ್ಸ್ಟ್ರಕ್ಟರ್ ತರಬೇತಿ ಪಡೆದಿದ್ದರು. 1993ರಲ್ಲಿ ನಾಸಾದಲ್ಲಿ ಗಗನಯಾತ್ರಿಯಾಗಲು ಅರ್ಜಿಯನ್ನು ಕಲ್ಪನಾ ಸಲ್ಲಿಸಿದ್ದರೂ ಅವರ ಅರ್ಜಿ ತಿರಸ್ಕೃತಗೊಂಡಿತ್ತು. ಮುಂದಿನ ವರ್ಷ ಮತ್ತೆ ಅರ್ಜಿ ಸಲ್ಲಿಸಿ 1995ರಲ್ಲಿ ಆಯ್ಕೆಯಾಗಿದ್ದರು.
ನವೆಂಬರ್ 19, 1997ರಲ್ಲಿ ಅವರು ಪ್ರಥಮ ಬಾರಿಗೆ ಬಾಹ್ಯಾಕಾಶ ನೌಕೆ ಕೊಲಂಬಿಯಾದ ಫ್ಲೈಟ್ ಎಸ್ಟಿಎಸ್-87 ಭಾಗವಾಗಿದ್ದರು. ಗಗನಯಾತ್ರಿಯಾದ ಪ್ರಥಮ ಭಾರತೀಯ ಮಹಿಳೆ ಹಾಗೂ ರಾಕೇಶ್ ಶರ್ಮ ನಂತರ ಗಗನಯಾತ್ರಿಯಾದ ಎರಡನೇ ಭಾರತೀಯ ಸಂಜಾತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಕಲ್ಪನಾ. ಈ ಬಾಹ್ಯಾಕಾಶ ಯೋಜನೆ ವಿಫಲವಾದರೂ ಕಲ್ಪನಾ ಅವರ ಕಾರ್ಯತತ್ಪರತೆಯನ್ನು ಎಲ್ಲರೂ ಹೊಗಳಿದ್ದರು.
ಮುಂದೆ ಅವರನ್ನು 2000ರಲ್ಲಿ ಎಸ್ಟಿಎಸ್-107 ಯೋಜನೆಯ ಭಾಗವನ್ನಾಗಿಸಿದ್ದು, ಅವರ ಪಾಲಿಗೆ ದುರಾದೃಷ್ಟ ತಂದಿತ್ತು. ಜನವರಿ 16, 2003ರಂದು ಉಡಾವಣೆಗೊಂಡ ಕೊಲಂಬಿಯಾ ಮಿಷನ್ ಯಶಸ್ವಿಯಾದರೂ ಅದು ಭೂಮಿಗೆ ಹಿಂದಿರುಗುತ್ತಿದ್ದ ಹಾದಿಯಲ್ಲಿ ಫೆಬ್ರವರಿ 1, 2003ರಂದು ಸ್ಫೋಟಗೊಂಡ ಕಾರಣ ಅದರಲ್ಲಿದ್ದ ಎಲ್ಲಾ ಏಳು ಮಂದಿ ಗಗನಯಾತ್ರಿಗಳೂ ಪ್ರಾಣ ಕಳೆದುಕೊಂಡರು.
ತಮ್ಮ ಕೊನೆಯ ಸ್ಪೇಸ್ ಮಿಷನ್ ಆರಂಭದ ಮುನ್ನ ಪತ್ರಿಕೆಯೊಂದರ ಜತೆ ಮಾತನಾಡಿದ್ದ ಕಲ್ಪನಾ "ನಾನು ಒಂದು ಮೂಲೆಯಲ್ಲಿರುವುದಕ್ಕೆ ಹುಟ್ಟಿಲ್ಲ. ಇಡೀ ಪ್ರಪಂಚವೇ ನನ್ನ ತಾಯ್ನಾಡು. ಶ್ರಮ ವಹಿಸಿ ದುಡಿಯಲು ಹಾಗೂ ಕನಸುಗಳನ್ನು ಸಾಕಾರಗೊಳಿಸಲು ಭಾರತ ನನ್ನನ್ನು ಪ್ರೇರೇಪಿಸಿತ್ತು" ಎಂದಿದ್ದರು.