ದೇಶದಲ್ಲಿ ಪ್ರತಿವಾರ ಧೂಮಪಾನದಿಂದ ಎಷ್ಟು ಸಾವಿರ ಮಂದಿ ಸಾಯುತ್ತಾರೆ ತಿಳಿದಿದೆಯೇ ?
ಧೂಮಪಾನಿಗಳೇ ಇತ್ತ ಗಮನಿಸಿ
ಹೊಸದಿಲ್ಲಿ, ಮಾ. 17: ಇತ್ತೀಚೆಗೆ ತಂಬಾಕು ಬಳಕೆದಾರರ ಸಂಖ್ಯೆ ಇಳಿಕೆಯಾಗುತ್ತಿರುವ ಹೊರತಾಗಿಯೂ ಭಾರತದಲ್ಲಿ 10-14 ವರ್ಷ ಪ್ರಾಯದ ಅಂದಾಜು 6,25,000 ಮಕ್ಕಳು ಧೂಮಪಾನ ಮಾಡುತ್ತಾರೆ ಎಂದು ಕಳೆದ ವಾರ ಬಿಡುಗಡೆ ಮಾಡಲಾದ ಗ್ಲೋಬಲ್ ಟೊಬ್ಯಾಕೊ ಅಟ್ಲಾಸ್ ದತ್ತಾಂಶ ತಿಳಿಸಿದೆ.
ಭಾರತದಲ್ಲಿ ತಂಬಾಕಿಗೆ ಸಂಬಂಧಿಸಿದ ಕಾಯಿಲೆಯಿಂದ ಪ್ರತಿ ವರ್ಷ 9,32,600 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ವಾರ 17,887 ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅಮೆರಿಕದ ಕ್ಯಾನ್ಸರ್ ಸೊಸೈಟಿ ಹಾಗೂ ಅಮೆರಿಕ ಮೂಲದ ವೈಟಲ್ ಸ್ಟ್ರಾಟಜಿಸ್ ಸಿದ್ಧಪಡಿಸಿದ ಟೊಬ್ಯಾಕೊ ಅಟ್ಲಾಸ್ ಹೇಳಿದೆ. ಭಾರತದಲ್ಲಿ 103 ದಶಲಕ್ಷ ವಯಸ್ಕರು (15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ಪ್ರಾಯದ) ಪ್ರತಿದಿನ ಧೂಮಪಾನ ಮಾಡುತ್ತಾರೆ. ಇದರಿಂದಾಗುವ ಒಟ್ಟು ವೆಚ್ಚ 1,818,691 ದಶಲಕ್ಷ. ಆದಾಗ್ಯೂ, ಮಧ್ಯಮ ಮಾನವ ಅಭಿವೃದ್ಧಿ ಸೂಚ್ಯಾಂಕ (ಎಚ್ಡಿಐ) ದೇಶಗಳಿಗಿಂತ ಭಾರತದಲ್ಲಿ ಕಡಿಮೆ ಮಕ್ಕಳು ಸಿಗರೇಟು ಸೇದುತ್ತಾರೆ. ಭಾರತದಲ್ಲಿ ಪ್ರತಿ ದಿನ 429,500 ಬಾಲಕರು ಹಾಗೂ 195,500 ಬಾಲಕಿಯರು ಸಿಗರೇಟು ಸೇದುತ್ತಾರೆ. ದಿನಂಪ್ರತಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಸಿಗರೇಟು ಸೇದುತ್ತಾರೆ. ಇವರ ಸಂಖ್ಯೆ ಕ್ರಮವಾಗಿ 90 ದಶಲಕ್ಷ ಹಾಗೂ 13 ದಶಲಕ್ಷ.
ಇನ್ನು 171 ದಶಲಕ್ಷ ಜನರು ಹೊಗೆರಹಿತ ತಂಬಾಕು ಸೇವಿಸುತ್ತಾರೆ. ಇದು ಬಾಯಿ ಹಾಗೂ ಗಂಟಲು ಕ್ಯಾನ್ಸರ್ಗೆ ಕಾರಣವಾಗುತ್ತಿದೆ.
‘‘ಹೃದಯ ರಕ್ತನಾಳದ ರೋಗ, ಪಕ್ಷವಾತ, ಶ್ವಾಸಕೋಶ ಹಾಗೂ ನಿರ್ದಿಷ್ಟ ಮಾದರಿಯ ರೋಗಕ್ಕೆ ತಂಬಾಕು ಬಳಕೆ ಮುಖ್ಯ ಕಾರಣ. ಆದುದರಿಂದ ತಂಬಾಕು ಬಳಕೆ ನಿಯಂತ್ರಿಸುವ ಅಗತ್ಯತೆ ಇದೆ.’’ ಎಂದು ಮುಂಬೈಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ಡಾ. ಪಂಕಜ್ ಚತುರ್ವೇದಿ ತಿಳಿಸಿದ್ದಾರೆ. 2016ರಲ್ಲಿ ಭಾರತದಲ್ಲಿ ಅಂದಾಜು 82.12 ದಶಲಕ್ಷ ಸಿಗರೇಟು ಉತ್ಪಾದಿಸಲಾಗಿತ್ತು.
2016ರಲ್ಲಿ ಜಗತ್ತಿನ ಆರು ತಂಬಾಕು ಉತ್ಪಾದಕ ಕಂಪೆನಿಯ ಒಟ್ಟು ಆದಾಯ 346 ದಶಲಕ್ಷ ಅಮೆರಿಕನ್ ಡಾಲರ್ ಇದು ಭಾರತದ ರಾಷ್ಟ್ರೀಯ ಆದಾಯಕ್ಕೆ ಸಮ.