ಮಡಿಕೇರಿ: 'ಕುಲ್ಲೇಟಿರ ಹಾಕಿ ನಮ್ಮೆ 2018'; ವಿನೂತನ ಪ್ರಯೋಗಗಳಿಗೆ ಚಾಲನೆ
![ಮಡಿಕೇರಿ: ಕುಲ್ಲೇಟಿರ ಹಾಕಿ ನಮ್ಮೆ 2018; ವಿನೂತನ ಪ್ರಯೋಗಗಳಿಗೆ ಚಾಲನೆ ಮಡಿಕೇರಿ: ಕುಲ್ಲೇಟಿರ ಹಾಕಿ ನಮ್ಮೆ 2018; ವಿನೂತನ ಪ್ರಯೋಗಗಳಿಗೆ ಚಾಲನೆ](https://www.varthabharati.in/sites/default/files/images/articles/2018/03/17/Z HOCKEY.jpg)
ಮಡಿಕೇರಿ, ಮಾ.17: 22ನೇ ವರ್ಷದ ಹಾಕಿ ಹಬ್ಬದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ನಾಪೋಕ್ಲು ಗ್ರಾಮದ ಕುಲ್ಲೇಟಿರ ಒಕ್ಕವು ಈ ಬಾರಿ ವಿನೂತನ ಪ್ರಯೋಗಗಳಿಗೆ ಮುಂದಾಗಿದೆ.
ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಹಾಕಿ ಉತ್ಸವಕ್ಕೆ ಸುಮಾರು 1.80 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. “ಕುಲ್ಲೇಟಿರ ಹಾಕಿ ನಮ್ಮೆ 2018” ಏಪ್ರಿಲ್ 15 ರಿಂದ ಮೇ 13 ರವರೆಗೆ ನಡೆಯಲಿದ್ದು, ತಂಡಗಳ ನೋಂದಣಿ ಈಗಾಗಲೇ ಆರಂಭಗೊಂಡಿದೆ.
ಹಾಕಿ ಪಂದ್ಯಾವಳಿಯ ಬಗ್ಗೆ ಮತ್ತಷ್ಟು ಅಭಿಮಾನ ಮೂಡಿಸಲು ರೋಡ್ ಶೋವನ್ನು ನಡೆಸಲಾಗುತ್ತಿದ್ದು, ಕುಲ್ಲೇಟಿರ ಐನ್ಮನೆಯಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಬೆಟ್ಟಗೇರಿ ಮೂರ್ನಾಡು ಮತ್ತು ಮಡಿಕೇರಿ ನಗರದಲ್ಲಿ ರೋಡ್ಶೋ ಈಗಾಗಲೆ ನಡೆದಿದೆ.
ಗ್ರೀನ್ ಮತ್ತು ಕ್ಲೀನ್ ಕೂರ್ಗ್ ಪರಿಕಲ್ಪನೆಯಡಿ ಸ್ವಚ್ಛ ಪರಿಸರದ ಬಗ್ಗೆ ಜಾಗೃತಿಯನ್ನು ರೋಡ್ ಶೋ ಮೂಲಕ ಮಾಡಲಾಗುತ್ತಿದೆ. ಕೊಡವ ಬುಕ್ ಪೆಸ್ಟ್, ಮಹಿಳಾ ದಿನಾಚರಣೆ, ಆಟೋ ಪೆಸ್ಟ್, ಮ್ಯೂಸಿಕಲ್ ನೈಟ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರೊಂದಿಗೆ ಜನರನ್ನು ಆಕರ್ಷಿಸಲು ಎರಡು ತಂಡಗಳ ನಡುವೆ ಪ್ಲಡ್ ನೈಟ್ ಪಂದ್ಯಾಟವನ್ನು ಕೂಡ ಆಯೋಜಿಸಲಾಗಿದೆ ಎಂದು ಕ್ರೀಡಾ ಸಮಿತಿಯ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ತಿಳಿಸಿದ್ದಾರೆ.
ಹಾಕಿಹಬ್ಬ ನಡೆಯುವ ಶಾಲಾ ಮೈದಾನಕ್ಕೆ ತಡೆಗೋಡೆ ಹಾಗೂ ಕಿರು ಕ್ರೀಡಾ ಗ್ಯಾಲರಿಯನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಂಸದರಾದ ಪ್ರತಾಪ್ಸಿಂಹ ಅವರು ಈಗಾಗಲೆ 20 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಈ ಬಾರಿ ಹಾಕಿ ಉತ್ಸವದಲ್ಲಿ ದಾಖಲೆ ಸಂಖ್ಯೆಯ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಲ್ಲಿ ಕುಲ್ಲೇಟಿರ ಕುಟುಂಬ ಕಾರ್ಯೋನ್ಮುಖವಾಗಿದೆ.