ಮಾ.21: ಜಾಗತಿಕ ಡೌನ್ ಸಿಂಡ್ರೋಮ್ ದಿನಾಚರಣೆ
ಮಂಗಳೂರು, ಮಾ.19: ನಗರದ ಶಕ್ತಿನಗರದಲ್ಲಿರುವ ‘ಸಾನಿಧ್ಯ’ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆ, ಲಯನ್ಸ್ ಕ್ಲಬ್ ಮಂಗಳೂರು ಮಿಲಾಗ್ರಿಸ್ ಹಾಗೂ ಬೆಂಗಳೂರಿನ ಭಿನ್ನ ಸಾಮರ್ಥ್ಯದ ಮಕ್ಕಳ ಕ್ರೀಡೆ ಮತ್ತು ಸಾಂಸ್ಕೃತಿಕ ಅಕಾಡಮಿಗಳಿಂದ ಮಾ.21ರಂದು ಜಾಗತಿಕ ಡೌನ್ ಸಿಂಡ್ರೋಮ್ ದಿನವನ್ನು ‘ಸಾನಿಧ್ಯ’ದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿಶೇಷ ಶಾಲೆಗಳ ಡೌನ್ಸ್ ವಿದ್ಯಾರ್ಥಿಗಳಿಗಾಗಿ ಬೋಚಿ-2018 ಕ್ರೀಡಾಕೂಟವನ್ನು ಬೆಳಗ್ಗೆ 10 ಗಂಟೆಗೆ ನಗರದ ಶಕ್ತಿನಗರದಲ್ಲಿರುವ ‘ಸಾನಿಧ್ಯ’ದಲ್ಲಿ ಹಮ್ಮಿಕೊಳ್ಳಲಾಗಿದೆ.
ಕ್ರೀಡಾಕೂಟವನ್ನು ಮಂಗಳೂರು ಪ್ರಾಂತದ ಅಪೋಸ್ಟೋಲಿಕ್ ಕಾರ್ಮೆಲ್ ಪ್ರಾಂತೀಯ ಮಹಾಭಗಿನಿ ವಂದನೀಯ ಕಾರ್ಮೆಲ್ ರೀಟಾ ಎ.ಸಿ. ಉದ್ಘಾಟಿಸಲಿದ್ದಾರೆ. ಮಾರ್ಡನ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಪ್ರಶಾಂತ್ ರಾವ್ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮಿಲಾಗ್ರಿಸ್ ಅಧ್ಯಕ್ಷೆ ಹೇಮಾ ಶರ್ಮ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2:15ಕ್ಕೆ ಬೋಚಿ-2018ರ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷೆ ಆಗ್ನೆಸ್ ಕುಂದರ್ ಮತ್ತು ವಿಜೇತ ಸ್ಪೆಷಲ್ ಸ್ಕೂಲ್‌ನ ಆಡಳಿತಾಧಿಕಾರಿ ಕಾಂತಿ ಹರೀಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೋಫಿಯಾ ಡಿಸೋಜ ಸಂಚಾಲಕರಾಗಲಿದ್ದಾರೆ ಎಂದು ಶಾಲೆಯ ಆಡಳಿತಾಧಿಕಾರಿ ವಸಂತ್‌ಕುಮಾರ್ ಶೆಟ್ಟಿ ತಿಳಿಸಿದ್ದಾರೆ.







