ಶಿವಮೊಗ್ಗ: ಸಿಡಿಲು ಬಡಿದು ಇಬ್ಬರು ಮೃತ್ಯು; ನಾಲ್ಕು ಎತ್ತುಗಳ ಸಾವು

ಶಿವಮೊಗ್ಗ, ಮಾ. 19: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ ಬೀಳುತ್ತಿರುವ ಅಕಾಲಿಕ ಮಳೆ ಮುಂದುವರಿದಿದೆ. ಜಿಲ್ಲೆಯ ಹೊಸನಗರ ಹಾಗೂ ಸಾಗರ ತಾಲೂಕುಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ಇಬ್ಬರು ನಾಗರೀಕರು ಹಾಗೂ ನಾಲ್ಕು ಜಾನುವಾರುಗಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಹೊಸನಗರ ವರದಿ: ಭಾನುವಾರ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಬಿಳಕಿ ಗ್ರಾಮದಲ್ಲಿ ರಾಮಪ್ಪ (55) ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇವರು ಮನೆಯ ಅಂಗಳದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಕುಸಿದು ಬಿದ್ದಿದ್ದರು.
ತಕ್ಷಣವೇ ಅವರನ್ನು ಕುಟುಂಬದವರು ಉಪಚರಿಸಿ ರಿಪ್ಪನ್‍ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿ ವೈದ್ಯರಿಲ್ಲದ ಕಾರಣದಿಂದ ಆಯನೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ರಿಪ್ಪನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ರಿಪ್ಪನ್‍ಪೇಟೆ ಬಳಿಯ ಕೋಟೆತಾರಿಗಾ ಗ್ರಾಮದಲ್ಲಿ ಸಿಡಿಲು ಬಡಿದು ತಿಮ್ಮಪ್ಪ ಎಂಬವರಿಗೆ ಸೇರಿದ 3 ಎತ್ತು ಹಾಗೂ ರಾಜಪ್ಪ ಎಂಬವರಿಗೆ ಸೇರಿದ 1 ಎತ್ತು ಸೇರಿದಂತೆ ಒಟ್ಟಾರೆ ನಾಲ್ಕು ಎತ್ತುಗಳು ಸ್ಥಳದಲ್ಲಿಯೇ ಅಸುನೀಗಿದ ಘಟನೆ ನಡೆದಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮಹಿಳೆ ಮೃತ್ಯು: ಸಾಗರ ತಾಲೂಕಿನ ಚೂರಿಕಟ್ಟೆ ಸಮೀಪದ ಯಡಗೋಡು ಗ್ರಾಮದಲ್ಲಿ ಸೋಮವಾರ ಸಿಡಿಲು ಬಡಿದು ಮನ್ಮನೆ ಗ್ರಾಮದ ನಿವಾಸಿ ನೇತ್ರಾವತಿ (38) ಎಂಬುವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಇವರ ಪತಿ ಸುರೇಶ್ (42) ರವರು ಗಂಭೀರವಾಗಿ ಗಾಯಗೊಂಡಿದ್ದು, ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಪತಿಯು ಗದ್ದೆ ಕೆಲಸ ಮುಗಿಸಿ ಮನೆಗೆ ಆಗಮಿಸುವಾಗ ಈ ಘಟನೆ ಸಂಭವಿಸಿದೆ.
ಮುಂದುವರಿಕೆ: ಜಿಲ್ಲೆಯಲ್ಲಿ ಅಕಾಲಿಕ ಮಳೆ ಮುಂದುವರಿದಿದೆ. ಹಲವೆಡೆ ಧಾರಾಕಾರ ಮಳೆಯಾಗಿರುವ ವರದಿಗಳು ಬಂದಿವೆ. ಶಿವಮೊಗ್ಗ ನಗರದಲ್ಲಿ ಸೋಮವಾರ ಮಧ್ಯಾಹ್ನ ಸಂಪೂರ್ಣ ಮೋಡ ಮುಸುಕಿದ ವಾತಾವರಣ ಕಂಡುಬಂತು. ಗುಡುಗು ಮಿಂಚಿ ಸಹಿತ ಉತ್ತಮ ಮಳೆಯಾಗಿದೆ.







