ಭಾರತದಲ್ಲಿ ರಸ್ತೆ ಅಪಘಾತದಿಂದ ವರ್ಷದಲ್ಲಿ 1.3 ಲಕ್ಷ ಜನರ ಸಾವು !

ಬೆಂಗಳೂರು, ಮಾ.19: ಭಾರತದಲ್ಲಿನ ರಸ್ತೆ ಬಳಕೆಯಿಂದ ಪ್ರತಿವರ್ಷ ದೇಶದಲ್ಲಿ 1.30 ಲಕ್ಷ ಜನರು ರಸ್ತೆ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ ಎಂದು ಬ್ರೈನ್ಸ್ ಸಂಸ್ಥೆಯ ಸಂಸ್ಥಾಪಕ ಡಾ.ಎನ್.ಕೆ.ವೆಂಕಟರಮಣ ವಿಷಾದ ವ್ಯಕ್ತಪಡಿಸಿದ್ದಾರೆ.
‘ವಿಶ್ವ ತಲೆಯ ಆಘಾತ ಜಾಗೃತಿ’ ದಿನದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಸ್ತೆ ಅಪಘಾತಗಳಿಂದ ಒಂದು ವರ್ಷಕ್ಕೆ 15 ಲಕ್ಷ ಜನರಿಗೆ ತೀವ್ರವಾಗಿ ತಲೆಗೆ ಗಾಯವಾಗಿ ಆಸ್ಪತ್ರೆ ತಲುಪುವ ಮುನ್ನವೇ ಶೇ. 60ರಷ್ಟು ಗಾಯಾಳುಗಳು ಮೃತಪಡುತ್ತಿದ್ದಾರೆ. ಹೀಗೆ ಸಾವನ್ನಪುತ್ತಿರುವವರಲ್ಲಿ ಶೇ. 60ರಷ್ಟು ಮಂದಿ 15 ರಿಂದ 40 ವರ್ಷ ವಯಸ್ಸಿನವರಾಗಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಅಪಘಾತದಲ್ಲಿ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದ್ದು, ಅದರಲ್ಲೂ ಬೆಂಗಳೂರು ನಗರದಲ್ಲಿ ನಿತ್ಯ ರಸ್ತೆ ಅಪಘಾತದಲ್ಲಿ ಸರಾಸರಿ ಎರಡು ಜೀವಗಳು ಬಲಿಯಾಗುತ್ತಿವೆ. ಒಂದು ವರ್ಷಕ್ಕೆ 700-800 ಮಂದಿ ರಸ್ತೆ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ನಿಯಂತ್ರಣ ಹೇಗೆ: ಚಾಲಕರು ವಾಹನ ಚಲಿಸುವಾಗ ಕಡ್ಡಾಯವಾಗಿ ಸೀಟ್‌ಬೆಲ್ಟ್ ಹಾಕುವುದು, ದ್ವಿಚಕ್ರ ವಾಹನದ ಮುಂಬದಿ ಹಾಗೂ ಹಿಂಬದಿ ಸಾವರರಿಬ್ಬರೂ ಹೆಲ್ಮೆಟ್ ಧರಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಸದಿರುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು. ಇವುಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಅಪಘಾತದ ಪ್ರಮಾಣ ಬಹುತೇಕ ಇಳಿಕೆಯಾಗಲಿದೆ ಎಂದು ಅವರು ಹೇಳಿದರು.
ಜಾಗೃತಿ ಕಾರ್ಯಕ್ರಮ: ವಿಶ್ವ ತಲೆಯ ಆಘಾತ ಜಾಗೃತಿ ದಿನದ ಅಂಗವಾಗಿ ಜ. 20ರಂದು ಬ್ರೈನ್ಸ್ ಆಸ್ಪತ್ರೆ ಹಾಗೂ ಗೋಲ್ಡನ್ ಅವರ್ ಸಂಸ್ಥೆ ಸಹಯೋಗದಲ್ಲಿ ನಗರದಾದ್ಯಂತ ತಲೆಯ ಆಘಾತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ತುರ್ತು ಸ್ಥಿತಿಯಲ್ಲಿ ರೋಗಿಯ ರಕ್ಷಣೆ ಮಾಡುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ನಗರದ ಹೆಬ್ಬಾಳ ಬಳಿಯ ಗೋಲ್ಡನ್ ಅವರ್ ಟ್ರೈನಿಂಗ್ ಅಕಾಡೆಮಿಯಿಂದ ಬೆಳಗ್ಗೆ 10.30ಕ್ಕೆ ಆಸ್ಪತ್ರೆಯ 15 ಜನರ ತಂಡ ಇರುವ ಆ್ಯಂಬುಲೆನ್ಸ್ ಅರಮನೆ ರಸ್ತೆ, ನೆಹರು ತಾರಾಲಯ, ಇನ್ ಫೆಂಟ್ರಿ ರಸ್ತೆ, ಕಬ್ಬನ್‌ಪಾರ್ಕ್, ವಿಧಾನಸೌಧ, ವಿಠಲ್‌ಮಲ್ಯರಸ್ತೆ, ಲಾಲ್‌ಬಾಗ್, ಜಯನಗರ, ಅಶೋಕ ಪಿಲ್ಲರ್, ರಿಚ್‌ಮಂಡ್‌ರಸ್ತೆ, ಎಂ.ಜಿ.ರಸ್ತೆ ಮಾರ್ಗವಾಗಿ ಬೈಯಪ್ಪನಹಳ್ಳಿ ವರೆಗೂ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ರೈನ್ಸ್ ಸಂಸ್ಥೆಯ ಸಿಇಓ ಡಾ.ಪ್ರಭಾಕರ್, ಡಾ.ಕೃಷ್ಣ ಚೈತನ್ಯ ಉಪಸ್ಥಿತರಿದ್ದರು.







