ರಸ್ತೆ ಅಪಘಾತ : ಮಣಿಪಾಲ ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು

ಬ್ರಹ್ಮಾವರ, ಮಾ.19: ಬ್ರಹ್ಮಾವರ ಭರಣಿ ಪೆಟ್ರೋಲ್ ಬಂಕ್ ಬಳಿ ಹೋಂಡ ಶೋರೂಮ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾ.18ರಂದು ಮಧ್ಯಾಹ್ನ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಣಿ ಪಾಲ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಮೃತರನ್ನು ದ್ವಿಚಕ್ರ ವಾಹನದ ಹಿಂಬದಿ ಸವಾರಿಣಿ ಮಣಿಪಾಲ ನರ್ಸಿಂಗ್ ಕಾಲೇಜಿನ ಮೂರನೆ ವರ್ಷದ ವಿದ್ಯಾರ್ಥಿನಿ, ಕೇರಳ ಮೂಲದ ಜಿಸ್ಮಿ ಜಾನಿ (21) ಎಂದು ಗುರುತಿಸಲಾಗಿದೆ. ವಾಹನ ಸವಾರೆ ಮೃತಳ ಸಹಪಾಠಿ ಬೆನಿಟಾ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಗೆಳೆಯರೆಲ್ಲ ಸೇರಿ ರಜಾ ದಿನವಾಗಿರುವ ರವಿವಾರ ಮಣಿಪಾಲದಿಂದ ಕುಂದಾಪುರ ಬೀಚ್ ಕಡೆಗೆ ದ್ವಿಚಕ್ರ ವಾಹನಗಳಲ್ಲಿ ಹೊರಟಿದ್ದರು. ಬೆನಿಟಾ ಹಾಗೂ ಜಿಸ್ಮಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕನ್ಟೈನರ್ ಲಾರಿಯು ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ಇವರಿಬ್ಬರು ದ್ವಿಚಕ್ರ ವಾಹನ ಸಹಿತ ರಸ್ತೆಯ ಎಡ ಬದಿಯ ಡಿವೈಡರ್‌ಗೆ ಬಿದ್ದು ಗಾಯಗೊಂಡರು. ಇವರಲ್ಲಿ ಗಂಭೀರವಾಗಿ ಗಾಯಗೊಂಡ ಜಿಸ್ಮಿ ಇಂದು ಬೆಳಗ್ಗೆ 9.45ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





