ಮಾ. 21ರಂದು ಎಪಿಡಿಯಿಂದ ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ
ಮಂಗಳೂರು, ಮಾ. 19: ಆ್ಯಂಟಿ ಪೊಲ್ಯೂಷನ್ ಡ್ರೈವ್ ಪ್ರತಿಷ್ಠಾನ (ಎಪಿಡಿ) ರಾಜ್ಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಅರಣ್ಯ ದಿನವನ್ನು ಮಾ. 21ರಂದು ಬೆಳಗ್ಗೆ 10ಗಂಟೆಗೆ ತಣ್ಣೀರುಬಾ ಟ್ರೀ ಪಾರ್ಕ್‌ನಲ್ಲಿ ಆಚರಿಸಲಿದೆ.
ಎಲ್ಲಾ ಪರಿಸರ ಸ್ನೇಹಿ ದಿನಗಳನ್ನು ಆಚರಿಸುವ ತನ್ನ ಹಿಂದಿನ ನಿರ್ಣಯದಂತೆ ಈ ಆಚರಣೆಯನ್ನು ಎಪಿಡಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಆ್ಯಂಟನಿ ವೇಸ್ಟ್‌ನ ಸಹಕಾರದೊಂದಿಗೆ ಸಂಘಟಿಸುತ್ತಿದೆ.
ಅರಣ್ಯ ಮತ್ತು ಸುಸ್ಥಿರ ನಗರಗಳು 2018ರ ಪ್ರಮುಖ ಘೋಷಣೆಯಾಗಿದ್ದು, ಅದರಂತೆ ಅರಣ್ಯ ಸಂರಕ್ಷಣೆ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ
ಮಂಗಳೂರು ನಗರದಲ್ಲಿ ಹೋರ್ಡಿಂಗ್ಸ್ ಜಾಹೀರಾತುಗಳು ಹೆಚ್ಚುತ್ತಿದ್ದು ಹೋರ್ಡಿಂಗ್ಸ್ ಜಾಹೀರಾತುಗಳಿಗಾಗಿ ಮರಗಳನ್ನು ಕಡಿತಗೊಳಿಸದೆ ಜಾಹೀೀರಾತು ಪ್ರದರ್ಶಿಸುವ ಪ್ರಜ್ಞೆ ಬೆಳೆಯಬೇಕಿದೆ. ಆಗ ನಗರದಲ್ಲಿಯೂ ಮರಗಳನ್ನು ಬೆಳೆಸುವ ಪ್ರವೃತ್ತಿ ಹೆಚ್ಚಲಿದೆ. ಇದನ್ನು ಎಪಿಡಿ ಉತ್ತೇಜಿಸಲಿದೆ ಎಂದು ಎಪಿಡಿಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ಲಾ ಎ. ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಪಿಡಿ ಸಂಘಟಿಸುತ್ತಿರುವ ಕಾರ್ಯಕ್ರಮಗಳಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಸುತ್ತಿದ್ದು, ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅರಣ್ಯ ಸಂರಕ್ಷಣೆಯ ಉದ್ದೇಶದೊಂದಿಗೆ ಕೈ ಜೋಡಿಸಬೇಕು ಎಂದಿದ್ದಾರೆ.







