ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯ ವಿಚಾರ: ಸರಕಾರದ ಆದೇಶಕ್ಕೆ ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು, ಮಾ.19: ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ಶಶಿಕಲಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯ ಒದಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೀಡಿರುವ ವರದಿಯ ವಿಚಾರದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ.
ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೀಡಿರುವ ವರದಿ ರದ್ದುಕೋರಿ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಎನ್.ಸತ್ಯನಾರಾಯಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ನ್ಯಾಯಪೀಠ, ವಿನಯ್‌ಕುಮಾರ್ ನೀಡಿರುವ ವರದಿಯ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಪುತ್ತಿಗೆ ಆರ್. ರಮೇಶ್ ಅವರು, ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಎನ್.ಸತ್ಯನಾರಾಯಣ ಅವರು ದಕ್ಷ ಅಧಿಕಾರಿ ಎಂದು ಹೆಸರು ಮಾಡಿದವರು. ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅಲ್ಲದೆ, ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ಅವರ ವರದಿಯೂ ಸತ್ಯನಾರಾಯಣಗೆ ಈಗಾಗಲೇ ಕ್ಲೀನ್ ಚಿಟ್ ನೀಡಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಎಐಎಡಿಎಂಕೆ ನಾಯಕಿ ಶಶಿಕಲಾಗೆ ವಿಶೇಷ ಸೌಲಭ್ಯ ಒದಗಿಸಿದ ಆರೋಪದ ಸಂಬಂಧ ಈಗಾಗಲೇ ಎಚ್.ಎನ್.ಸತ್ಯನಾರಾಯಣ ವಿರುದ್ಧ ಎಸಿಬಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಸರಕಾರ ಕೂಡ ತನಿಖೆಗೆ ಆದೇಶಿಸಿದೆ. ಹೀಗಾಗಿ, ತನಿಖೆ ಮುಂದುವರಿಯಲಿ ಹಾಗೂ ತಪ್ಪು ಮಾಡಿರುವ ದಾಖಲೆ ಲಭ್ಯವಾದರೆ ಚಾರ್ಜ್‌ಶೀಟ್ ಕೂಡ ಸಲ್ಲಿಸಲಿ. ಇಲ್ಲವಾದರೆ ಕೋರ್ಟ್‌ಗೆ ಸಾಕ್ಷಿಗಳಿಲ್ಲ ಎಂದು ವರದಿಯನ್ನು ಸಲ್ಲಿಸಬಹುದಾಗಿದೆ ಎಂದು ನ್ಯಾಯಪೀಠವು ಅರ್ಜಿದಾರರ ಪರ ವಕೀಲರಿಗೆ ಪ್ರತಿಕ್ರಿಯೆ ನೀಡಿತು.
ಈಗಾಗಲೇ ಎಸಿಬಿ ಅವರು ಸತ್ಯನಾರಾಯಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ನೀವು ಬೇಕಾದರೆ(ಅರ್ಜಿದಾರರು) ಎಫ್‌ಐಆರ್ ರದ್ದುಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ನ್ಯಾಯಪೀಠದ ಅಭಿಪ್ರಾಯ ಆಲಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿ ತಿದ್ದುಪಡಿಗೆ ಎರಡು ದಿನ ಕಾಲಾವಕಾಶಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.







