ಉ.ಪ್ರದೇಶ ಸರಕಾರಕ್ಕೆ ಒಂದು ವರ್ಷ: ಆದಿತ್ಯನಾಥ್ ಆಡಳಿತದ ಬಗ್ಗೆ ಮಿತ್ರಪಕ್ಷಗಳಲ್ಲೇ ಅಸಮಾಧಾನ

ಲಕ್ನೋ, ಮಾ.19: ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ಸೋಮವಾರದಂದು ಒಂದು ವರ್ಷ ಸಂಪೂರ್ಣಗೊಳಿಸಿದೆ. ಆದರೆ ಸರಕಾರ ಕಾರ್ಯವೈಖರಿ ಬಗ್ಗೆ ಮಿತ್ರಪಕ್ಷಗಳೇ ಅಸಮಾಧಾನವನ್ನು ಹೊಂದಿರುವುದು ಈ ವೇಳೆ ಬಯಲಾಗಿದೆ.
ಬಿಜೆಪಿಯ ಮಿತ್ರಪಕ್ಷವಾದ ಸುಹೆಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಹಾಗೂ ಉ.ಪ್ರದೇಶ ಸಂಪುಟ ಸಚಿವ ಓಂ ಪ್ರಕಾಶ್ ರಾಜ್ಬರ್ ಬಹಿರಂಗವಾಗಿ ಸರಕಾರವನ್ನು ದೂರಿದ್ದಾರೆ. ಸರಕಾರವು ತನ್ನ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತ ಎಂದು ಅವರು ಎಚ್ಚರಿಸಿದ್ದಾರೆ. ಮಥುರ ಮತ್ತು ಕಾಶಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಬಗ್ಗೆ ಮಾತನಾಡುವುದು ಮತ್ತು ಆಚರಣೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಇತರ ಯಾರಿಗೂ ಈ ಸರಕಾರವನ್ನು ಪ್ರಶ್ನಿಸುವ ಧೈರ್ಯವಿಲ್ಲ. ಸತ್ಯವನ್ನು ಮಾತನಾಡುವುದೇ ಬಂಡಾಯ ಎಂದಾದರೆ ನಾನು ಬಂಡಾಯ ಏಳುತ್ತಿದ್ದೇನೆ ಎಂದು ರಾಜ್ಬರ್ ತಿಳಿಸಿದ್ದಾರೆ.
ಈ ಹಿಂದೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಉತ್ತರ ಪ್ರದೇಶದಲ್ಲಿ ಅನುಭವಿಸಿದ ಸೋಲಿನಿಂದ ಪಾಠ ಕಲಿತು ಸಮಾಜದ ಕೆಲವು ಸಮುದಾಯಗಳ ಜೊತೆ ಕಾರ್ಯಾಚರಿಸುತ್ತಿರುವ ರೀತಿಯಲ್ಲಿ ಬದಲಾವಣೆ ಮಾಡುವಂತೆ ಬಿಜೆಪಿಗೆ ಸಲಹೆ ನೀಡಿದ್ದರು. ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಬಿಜೆಪಿಯು ಆದಿತ್ಯನಾಥ್‌ರ ಭದ್ರಕೋಟೆಯಂತಿದ್ದ ಗೋರಖ್‌ಪುರ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಸೋಲನುಭವಿಸಿತ್ತು. ಕಳೆದ ವಾರವಷ್ಟೇ ಬಿಜೆಪಿಯ ದಕ್ಷಿಣದ ಮಿತ್ರಪಕ್ಷ ತೆಲುಗುದೇಶಂ ಪಾರ್ಟಿ ಕೇಂದ್ರ ಸರಕಾರದಿಂದ ಹೊರಬಂದು ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ನಿರ್ಧರಿಸಿತು.







