ಸಮುದ್ರದ ನೀರು ಶುದ್ಧೀಕರಣ ಘಟಕ: ತಾಂತ್ರಿಕ ಆರ್ಥಿಕ ಕಾರ್ಯ ಸಾಧ್ಯತೆಯ ವರದಿಗೆ ಸಂಪುಟ ಒಪ್ಪಿಗೆ
ಬೆಂಗಳೂರು, ಮಾ. 19: ಮಂಗಳೂರಿನಲ್ಲಿ 100 ಎಂಎಲ್‌ಡಿ ಸಾಮರ್ಥ್ಯದ ಸಮುದ್ರ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ತಯಾರಿಸಿರುವ 806 ಕೋಟಿ ರೂ.ಗಳ ತಾಂತ್ರಿಕ ಆರ್ಥಿಕ ಕಾರ್ಯ ಸಾಧ್ಯತೆಯ ವರದಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ 2003ನೆ ಸಾಲಿನಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಸಂಬಂಧ ಉಪ ಲೋಕಾಯುಕ್ತರ ಶಿಫಾರಸಿನಂತೆ ದಂಡನೆಗೆ ಒಳಗಾದ 8 ಮಂದಿ ಅಧಿಕಾರಿಗಳ ಪೈಕಿ ನಾಲ್ವರನ್ನು ದೋಷಮುಕ್ತಗೊಳಿಸಿದೆ ಎಂದರು.
ಹಾವೇರಿ ಜಿಲ್ಲೆ ಹೀರೆಕೆರೂರಿನಲ್ಲಿ ಸರ್ವಜ್ಞ ಪ್ರಾಧಿಕಾರ ಅಧಿನಿಯಮ ಕರಡು ವಿಧೇಯಕ ಅನುಮೋದನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 62 ಕೋಟಿ ರೂ.ವೆಚ್ಚದ ಪಂಚಾಯತ್ ರಾಜ್ ಭವನ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
‘ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟ ಐಎಫ್‌ಎಸ್ ಅಧಿಕಾರಿ ಮಣಿಕಂಠನ್ ಅವರ ಪತ್ನಿ ಸಂಗೀತಾ ಮಣಿಕಂಠನ್ ಅವರಿಗೆ ಗ್ರೂಪ್ ‘ಎ’ ಹುದ್ದೆ ಹಾಗೂ ಮಣಿಕಂಠನ್ ಅವರ ವಿಶ್ರಾಂತಿ ವೇತನ್ಯ-ಭತ್ತೆ ಹಾಗೂ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ 50 ಲಕ್ಷ ರೂ.ಹಣ ನೀಡಲು ಸಂಪುಟ ಒಪ್ಪಿಗೆ ನೀಡಿದೆ’
-ಟಿ.ಬಿ.ಜಯಚಂದ್ರ ಕಾನೂನು ಸಚಿವ







