ಪರಿಶಿಷ್ಟರ ಒಳ ಮೀಸಲಾತಿ ಹೋರಾಟವನ್ನು ಕೈಬಿಡಬೇಕು: ಸಚಿವ ಎಚ್.ಆಂಜನೇಯ

ಬೆಂಗಳೂರು, ಮಾ. 19: ಮಾದಿಗ (ಎಡಗೈ) ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಮತ್ತು ಆರ್ಥಿಕ ಶಕ್ತಿ ನೀಡಿದ್ದಾರೆ. ಹೀಗಾಗಿ, ಪರಿಶಿಷ್ಟರ ಒಳ ಮೀಸಲಾತಿ ಹೋರಾಟವನ್ನು ಕೈಬಿಡಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮನವಿ ಮಾಡಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ, ಸಚಿವ ಆರ್.ಬಿ.ತಿಮ್ಮಾಪೂರ್, ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಡಾ.ಎಲ್.ಹನುಮಂತಯ್ಯ, ಮೇಲ್ಮನೆ ಸದಸ್ಯ ಧರ್ಮಸೇನ ಉಪಸ್ಥಿತಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಪೃಶ್ಯರ ಕಲ್ಯಾಣಕ್ಕಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಸಂಬಂಧದ ನ್ಯಾ.ಸದಾಶಿವ ಆಯೋಗದ ವರದಿ ಪರಿಶೀಲಿಸಲು ಈಗಾಗಲೇ ಸಂಪುಟ ಉಪ ಸಮಿತಿ ರಚನೆ ಮಾಡಿದೆ. ಅಲ್ಲದೆ, ಈಗಾಗಲೇ ಒಳ ಮೀಸಲಾತಿ ಸಂಬಂಧ ಆಂಧ್ರ, ತೆಲಂಗಾಣ ಕೇಂದ್ರಕ್ಕೆ ಮಾಡಿರುವ ಶಿಫಾರಸು ನೆನೆಗುದಿಗೆ ಬಿದ್ದಿದೆ. ಹೀಗಾಗಿ ಶಿಫಾರಸು ಮಾಡುವುದರಿಂದ ಯಾವುದೇ ಆರ್ಥಿಕ ಸೌಲಭ್ಯ ದೊರೆಯದು ಎಂದು ಅವರು ತಿಳಿಸಿದರು.
ಶೀಘ್ರವೇ ಸಭೆ: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಟ ಕೈಗೊಂಡಿರುವ ಸಮುದಾಯದ ಎಲ್ಲ ಮುಖಂಡರನ್ನು ಶೀಘ್ರದಲ್ಲೆ ಸಭೆ ಕರೆದು ಅವರ ಮನವೋಲಿಕೆ ಮಾಡಲಾಗುವುದು ಎಂದ ಅವರು, ಚಳಿವಳಿಗಾರರು ಸರಕಾರಕ್ಕೆ ಯಾವುದೇ ಕಾರಣಕ್ಕೂ ಮುಜುಗರ ತರಬಾರದು ಎಂದು ಮನವಿ ಮಾಡಿದರು.







