ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಜಿ.ಪರಮೇಶ್ವರ್

ಹಾಸನ,ಮಾ.19: ಮುಂಬರುವ 2018ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೊಂದು ವಾರದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಭರವಸೆ ನುಡಿದರು.
ಮಾರ್ಚ್ 21 ಹಾಸನಕ್ಕೆ ರಾಹುಲ್ ಗಾಂಧಿ ಭೇಟಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರು ಎರಡನೇ ಹಂತದ ರಾಜ್ಯ ಪ್ರವಾಸ ಕೈಗೊಂಡಿದ್ದು, ಜಿ. ಪರಮೇಶ್ವರ್ ಅವರು ಜಿಲ್ಲಾಕ್ರೀಡಾಂಗಣವನ್ನು ಪರಿಶೀಲಿಸಿದ ಸಿದ್ಧತೆ ಬಗ್ಗೆ ಮಾಹಿತಿ ಪಡೆದು, ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಒಂದೇ ಮಾನದಂಡವಾಗಿದ್ದು, ಶಾಸಕ ಹಾರಿಸ್ ಸೇರಿದಂತೆ ಹಾಲಿ ಇರುವ ಶಾಸಕರಿಗೆ ಟಿಕೆಟ್ ನೀಡುವ ಚಿಂತನೆ ನಡೆಯುತ್ತಿದೆ ಎಂದರು.
ಜೆಡಿಎಸ್ ಬಂಡಾಯ ಶಾಸಕರ ಟಿಕೆಟ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಮಾ.25 ರಂದು ಕಾಂಗ್ರೆಸ್ ಸೇರುವ ಸಾಧ್ಯತೆ ಇದ್ದು, ಆನಂತರ ಅದರ ಬಗ್ಗೆ ಚರ್ಚೆ ಮಾಡುತ್ತೇವೆಂದು ಹೇಳಿದರು. ಇವಿಎಂ ಬಳಕೆ ಬಗ್ಗೆ ನಮ್ಮ ಪಕ್ಷದಿಂದಲೂ ತೀವ್ರ ವಿರೋಧವಿದೆ. ಈ ಬಗ್ಗೆ ಎಐಸಿಸಿಯಲ್ಲಿ ರೆಜೂಲೆಷನ್ ಮಾಡಲಾಗಿದ್ದು, ಅದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿ ಬ್ಯಾಲೆಟ್ ಪೇಪರ್ ಅನ್ನು ಬಳಸುವಂತೆ ಆಗ್ರಹಿಸಲಾಗುವುದು ಎಂದು ತೀಳಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಹರ್ಷ ಮೊಯ್ಲಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದರು. ಲಿಂಗಾಯತ ಮತ್ತು ವೀರಶೈವ ಧರ್ಮ ಸಂಘರ್ಷದಲ್ಲಿ ಕಾಂಗ್ರೆಸ್ ಪಕ್ಷ ಭಾಗವಹಿಸಿಲ್ಲ. ಇಬ್ಬರು ಸಚಿವರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ ಎಂದ ಅವರು, ಅಶೋಕ್‍ಖೇಣಿ ಸೇರ್ಪಡೆ ಬಗ್ಗೆ ಹಲವರು ವಿರೋಧ ಮಾಡುತ್ತಿರಬಹುದು. ಈ ವಿಷಯ ಪಕ್ಷ ತೀರ್ಮಾನ ಕೈಗೊಂಡಿದೆ. ಅದಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಹೇಳಿದರು. ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಸಿದ್ಧಾಂತದಲ್ಲಿ ಎಲ್ಲಾರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ಸಚಿವ ಬಿ. ಶಿವರಾಂ, ಹೆಚ್.ಕೆ. ಮಹೇಶ್ ಇತರರು ಉಪಸ್ಥಿತರಿದ್ದರು.







