ಮೂಡುಬಿದಿರೆಯಲ್ಲಿ ಶಾಸಕರ ವಿರುದ್ಧ ಪ್ರತಿಭಟನಾ ಸಭೆ : ವಜ್ರದೇಹಿ ಮಠದ ಶ್ರೀಗಳಿಂದ ಶಾಸಕರಿಗೆ ಬಹಿರಂಗ ಸವಾಲು

ಮೂಡುಬಿದಿರೆ, ಮಾ.19: ಅಹಿಂಸೆಯನ್ನು ಪ್ರತಿಪಾದಿಸ ಬೇಕಾದ ಶಾಸಕ ಕೆ. ಅಭಯಚಂದ್ರ ಜೈನ್ ಹಿಂಸಾತ್ಮಕ ನಡೆ ನುಡಿಯ ಮಾರ್ಗದಲ್ಲಿ ನಡೆದಿರುವುದು ಸರಿಯಿಲ್ಲ. ತಾಕತ್ತಿದ್ದರೆ ಅವರು ವಜ್ರದೇಹಿಯ ಸುದ್ದಿಗೆ ಬರಲಿ. ತಾನು ಸುಮ್ಮನಿರುವ ಸಂತನಲ್ಲ. ನೇರ ವಿಧಾನ ಸೌಧಕ್ಕೂ ಬಂದು ಜರೆಯುತ್ತೇನೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಗುಡುಗಿದ್ದಾರೆ. ಅವರು ಕರಿಂಜೆ ಶ್ರೀಗಳವರಿಗೆ ಅವಮಾನಿಸಿ ಮಾತನಾಡಿದ್ದ ಹಿಂದೂ ವಿರೋಧಿ ಶಾಸಕರ ವಿರುದ್ಧ ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಪ್ರಖಂಡದ ವತಿಯಿಂದ ಸೋಮವಾರ ಸಂಜೆ ಸ್ವರಾಜ್ಯ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಶಾಸಕರು ಕರಿಂಜೆ ಶ್ರೀಗಳವರನ್ನು ಅಪಮಾನಿಸಿದ್ದಾಗಿದೆ. ಇನ್ನೀಗ ಕಾಲು ಮುಟ್ಟಿ ಕ್ಷಮೆಯಾಚಿಸಿದರೂ ಅವರು ಸೋಲುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅವರೇನಿದ್ದರೂ ಸನ್ಯಾಸ ದೀಕ್ಷೆ ಪಡೆದು ಮಠ ಕಟ್ಟಿಕೊಳ್ಳಲು ಸಿದ್ಧರಾಗಿ ಎಂದವರು ಹೇಳಿದರು.
ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಮಾತನಾಡಿ ಹಿಂದುತ್ವದ ಬಗ್ಗೆ ಗಟ್ಟಿ ಧ್ವನಿ ಎತ್ತಲು ವಜ್ರದೇಹಿ ಶ್ರೀಗಳವರೇ ಸ್ಫೂರ್ತಿಯಾಗಿದ್ದಾರೆ. ಶಾಸಕರು ಜೇನುಗೂಡಿಗೆ ಕಲ್ಲು ಎಸೆದು ಸಮಸ್ಯೆಯನ್ನು ಎದುರು ಹಾಕಿಕೊಂಡಂತಾಗಿದೆ ಎಂದರು.
ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‍ಜೀ ಮಾತನಾಡಿ ಕರ್ನಾಟಕದಲ್ಲಿ ಈಗ ಇರುವುದು ಹಿಂದೂ ವಿರೋಧಿ ಟಿಪ್ಪು ಜಯಂತಿ ಆಚರಿಸಿದ, ಗೋಹಂತಕರನ್ನು ಬೆಂಬಲಿಸುವ ರಾವಣ ರಾಜ್ಯ ಎಂದವರು ಹೇಳಿದರು. ಗಾಂಧೀ ತತ್ವ ಪಾಲಿಸುವವರಲ್ಲ. ಹೆಡ್ಗೇವಾರ್ ತತ್ವ ಪಾಲಕರು. ಹಿಂದೂ ಸ್ವಾಮೀಜಿಯವರನ್ನು ನಿಂದಿಸಿ ಮೂಡುಬಿದಿರೆ ಶಾಸಕರು ತಪ್ಪೆಸಗಿದ್ದಾರೆ. ಅವರಿಗೆ ಶಿಕ್ಷೆ ಗ್ಯಾರಂಟಿ. ನಮಗೆ ಅವರ ರಾಜೀನಾಮೆ ಬೇಡ, ಜನರೇ ಅವರ ರಾಜೀನಾಮೆ ಕೊಡಿಸ್ತಾರೆ ಎಂದವರು ಹೇಳಿದರು.
ಸ್ವಾಮೀಜಿಯವರು ಭೂ ಅತಿಕ್ರಮಣ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವ ಶಾಸಕರು ತಮ್ಮ ಬೆಂಬಲಿಗರು ಮಾಡಿರುವ ಅಕ್ರಮಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಓಲೈಕೆಯ ರಾಜಕಾರಣದಿಂದ ಹಿಂದೂಗಳಿಗೆ ಇಲ್ಲಿ ಅಪಮಾನವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದರು. ವಿಹಿಂಪ ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿಹಿಂಪ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ,ಭಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್ ಉಪಸ್ಥಿತರಿದ್ದರು. ಭಜರಂಗದಳ ತಾಲೂಕು ಸಂಚಾಲಕ ಸುಚೇತನ್ ಜೈನ್ ಸ್ವಾಗತಿಸಿದರು. ವಿಹಿಂಪ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಭೆಗೂ ಮೊದಲು ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.







