ಬ್ರಿಟನ್ ಕ್ಷಮೆಯಾಚಿಸಲಿ

ಡಿಮಿಟ್ರಿ ಪೆಸ್ಕೊವ್
ಮಾಸ್ಕೊ,ಮಾ.19: ಮಾಜಿ ಡಬಲ್ ಏಜೆಂಟ್ ಸೆರ್ಗೆಯಿ ಸ್ಕ್ರಿಪಲ್ ಅವರಿಗೆ ವಿಶಪ್ರಾಶನವಾದ ಘಟನೆಯಲ್ಲಿ ರಶ್ಯದ ಪಾತ್ರವಿದೆಯೆಂಬುದನ್ನು ಬ್ರಿಟನ್ ಸಾಬೀತುಪಡಿಸಬೇಕು ಇಲ್ಲವೇ ಅದು ಕ್ಷಮೆಯಾಚಿಸಬೇಕೆಂದು ಕ್ರೆಮ್ಲಿನ್ (ರಶ್ಯನ್ ಸರಕಾರದ ಅಧಿಕಾರಕೇಂದ್ರ) ಸೋಮವಾರ ಸವಾಲೊಡ್ಡಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಅವರ ಗೆಲುವಿನ ಬೆನ್ನಲ್ಲೇ ರಶ್ಯದ ಅಧ್ಯಕ್ಷೀಯ ವಕ್ತಾರ ಡಿಮಿಟ್ರಿ ಪೆಸ್ಕೊವ್ ಮಾಸ್ಕೊದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ಒಂದಲ್ಲ ಒಂದು ದಿನ ಇಂತಹ ತಿರುಳಿಲ್ಲದ ಆರೋಪಗಳಿಗೆ ಉತ್ತರಿಸಲಾಗುವುದು. ರಶ್ಯದ ವಿರುದ್ಧ ಮಾಡಲಾದ ಈ ಆರೋಪಗಳಿಗೆ ( ಬ್ರಿಟನ್ನಲ್ಲಿ ರಶ್ಯನ್ ಡಬಲ್ ಏಜೆಂಟ್ ಸೆರ್ಗೆಯಿ ಸ್ಕ್ರಿಪಲ್ಗೆ ವಿಷಪ್ರಾಶನ) ಸಂಬಂಧಿಸಿ ಸೂಕ್ತ ಸಾಕ್ಷಾಧಾರಗಳನ್ನು ಮುಂದಿಡಬೇಕು ಇಲ್ಲವಾದಲ್ಲಿ ಕ್ಷಮೆಯಾಚಿಸಬೇಕು’’ ಎಂದವರು ಆಗ್ರಹಿಸಿದ್ದಾರೆ.
ಮಾರ್ಚ್ 4ರಂದು ಬ್ರಿಟನ್ನ ಸ್ಯಾಲಿಸ್ಬರಿ ನಗರದಲ್ಲಿ ಸೆರ್ಗೆಯಿ ಹಾಗೂ ಅವರ ಪುತ್ರಿ ಯೂಲಿಯಾ ಅವರಿಗೆ ವಿಷಪ್ರಾಶನ ನಡೆಸಿದ ಘಟನೆಯಲ್ಲಿ ರಶ್ಯ ಇದೆಯೆಂಬ ಬ್ರಿಟನ್ ಹಾಗೂ ಅದರ ಮಿತ್ರರಾಷ್ಟ್ರಗಳ ಆರೋವನ್ನು ಪುಟಿನ್ ರವಿವಾರ ನಿರಾಕರಿಸಿದ್ದರು.





