ಟೆಕ್ಸಾಸ್: 16 ದಿನಗಳಲ್ಲಿ ನಾಲ್ಕು ಸರಣಿ ಸ್ಫೋಟ

ಆಸ್ಟಿನ್,ಮಾ.19: ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ಕಳೆದ ಹದಿನೈದು ದಿನಗಳಲ್ಲಿ ನಾಲ್ಕು ಬಾಂಬ್ ಸ್ಫೋಟಗಳು ನಡೆದಿದ್ದು,ಇದೊಂದು ಸರಣಿ ಬಾಂಬರ್ ಒಬ್ಬಾತನ ಕೃತ್ಯವೆಂದು ಅಮೆರಿಕದ ಪೊಲೀಸರು ಶಂಕಿಸಿದ್ದಾರೆ. ರವಿವಾರ ರಾತ್ರಿ ಆಸ್ಟಿನ್ ನಗರದ ವಸತಿ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಸಾಧನವೊಂದು ಸ್ಫೋಟಿಸಿ ಇಬ್ಬರು ಗಾಯಗೊಂಡಿದ್ದು, ಅವರಿಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.
ಮಾರ್ಚ್ 2ರಂದು ಆಸ್ಟಿನ್ ನಗರದಲ್ಲಿ ಪಾರ್ಸೆಲ್ ಬಾಂಬೊಂದು ಮನೆಬಾಗಿಲ ಬಳಿ ಸ್ಫೋಟಿಸಿ ಆ್ಯಂಟನಿ ಸ್ಟೀಫನ್ ಎಂಬಾತ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದರು. ಮಾರ್ಚ್ 12ರಂದು ಇನ್ನೆರಡು ಪಾರ್ಸೆಲ್ ಬಾಂಬ್‌ಗಳು ಸ್ಫೋಟಿಸಿದ್ದು, 17 ವರ್ಷದ ಡ್ರೇಲಿನ್ ವಿಲಿಯಮ್ ಮೇಸನ್ ಎಂಬಾತ ಸಾವನ್ನಪ್ಪಿದ್ದರು. ಸ್ಫೋಟದಲ್ಲಿ ಆತನ ತಾಯಿಗೆ ಗಂಭೀರ ಗಾಯಗಳಾಗಿದ್ದವು. ಅ ದಿನವೇ ನಡೆದ ಇನ್ನೊಂದು ಸ್ಫೋಟದಲ್ಲಿ ಹಿಸ್ಪಾನಿಕ್ ಜನಾಂಗದ ಯುವತಿಯೊಬ್ಬಳು ಗಾಯಗೊಂಡಿದ್ದರು. ಈ ಎರಡೂ ಘಟನೆಗಳಲ್ಲಿ ಮೃತಪಟ್ಟವರು ಕರಿಯಜನಾಂಗೀಯರಾಗಿದ್ದರು.
ಈ ಹಿನ್ನೆಲೆಯಲ್ಲಿ ಇದೊಂದು ಜನಾಂಗೀಯ ದ್ವೇಷದ ಕೃತ್ಯವಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲವೆಂದು ಪೊಲೀಸರು ತಿಳಿಸಿದ್ದರು. ಸರಣಿ ಬಾಂಬ್ ಸ್ಫೋಟದ ಹಿಂದಿರುವ ಪಾತಕಿಯ ಪತ್ತೆಗೆ ಸುಳಿವು ನೀಡಿದವರಿಗೆ ಟೆಕ್ಸಾಸ್ ಪೊಲೀಸರು 1 ಲಕ್ಷ ಡಾಲರ್‌ಗಳ ಬಹುಮಾನ ಘೋಷಿಸಿದ್ದಾರೆ.





