ಅರಿವು ಯೋಜನೆಯಡಿ ವಿದ್ಯಾಭ್ಯಾಸ ಸಾಲಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಮಾ.20: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2018-19ನೆ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯಬಯಸುವ ಅಲ್ಪಸಂಖ್ಯಾತರಾದ ಮುಸಲ್ಮಾನ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಪಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ 'ಅರಿವು' ಯೋಜನೆಯಡಿ ವಿದ್ಯಾಭ್ಯಾಸ ಸಾಲವನ್ನು ಪಡೆಯಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯಬಯಸುವ ವಿದ್ಯಾರ್ಥಿಗಳು ಎ.3ರ ಸಂಜೆ 5:30ರೊಳಗೆ 'ಆನ್-ಲೈನ್' ಮೂಲಕ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿಗದಿಪಡಿಸುವ ಶುಲ್ಕದ ಅನ್ವಯ ನಿಗಮವು ವಿದ್ಯಾಭ್ಯಾಸ ಸಾಲವನ್ನು ಮುಂಚಿತವಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಂಜೂರು ಮಾಡಿ ತದನಂತರ ಮಂಜೂರಾದ ಹಣವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕಾಲೇಜಿಗೆ ನೇರವಾಗಿ ಪಾವತಿಸುತ್ತದೆ.
ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ, 'ಆಧಾರ್ ಕಾರ್ಡ್' ಸಂಖ್ಯೆ, ವಿಳಾಸ ಪುರಾವೆಗಾಗಿ ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ವಾರ್ಷಿಕ ಆದಾಯವು ರೂ. 6 ಲಕ್ಷವನ್ನು ಮೀರಿರಬಾರದು), ವಿದ್ಯಾರ್ಥಿಯ ಇ-ಮೇಲ್ ಐಡಿ, ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಅರ್ಜಿಗಳಲ್ಲಿ ಕಡ್ಡಾಯವಾಗಿ ಒದಗಿಸಬೇಕು. ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು, ದೂ.ಸಂ: 0824-2429044 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.







