ಕೊಳ್ಳೇಗಾಲ: ಮಾ. 24 ರಂದು ನಗರಕ್ಕೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ

ಕೊಳ್ಳೇಗಾಲ. ಮಾ. 20: ಮಾರ್ಚ 24 ರಂದು ನಗರಕ್ಕೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಲು ಕಾರ್ಯಕರ್ತರು ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸಂಸದ ಆರ್ ಧ್ರುವನಾರಾಯಣ್ ಸಲಹೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ರಾಹುಲ್ ಗಾಂಧಿ ರೋಡ್ ಶೋ ಕುರಿತು ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಇದೇ ತಿಂಗಳು ಮಾರ್ಚ 24 ರಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ.
ಚಾಮರಾಜನಗರದಲ್ಲಿ ನಡೆಯುವ ಸಭೆ ಮುಗಿಸಿಕೊಂಡು ಮದ್ಯಾಹ್ನ 3 ಗಂಟೆಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಬರುವ ರಾಹುಲ್ ಗಾಂಧಿಯವರು ಪ್ರಮುಖ ಮುಖ್ಯ ರಸ್ತೆಯಲ್ಲಿ ಬರುವ ಗ್ರಾಮಗಳಲ್ಲಿ ದಾರಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಅದ್ದೂರಿಯಾಗಿ ಸ್ವಾಗತಿಸಬೇಕು ಹಾಗೂ ಅವರ ಪ್ರವಾಸವನ್ನು ಯಶಸ್ವಿಗೊಳಿಸ ಬೇಕು ಮತ್ತು ಬರುವ ಜನರಿಗೆ ನೀರು, ನೆರಳಿನ ವ್ಯವಸ್ಥೆ ಮಾಡಬೇಕೆಂದು ಎಂದು ಕಾಂಗ್ರೇಸ್ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ನೇತೃತ್ವದ ಸರ್ಕಾರ ಬರಬೇಕು. ಹಾಗಾದರೆ ಮಾತ್ರ 2019 ರ ಲೋಕಸಭಾ ಚುನಾವಣೆಗೆ ಅದು ದಿಕ್ಸೂಚಿಯಾಗುತ್ತದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವೀಕ್ಷಕ ಬಸವರಾಜು, ಶಾಸಕ ಎಸ್.ಜಯಣ್ಣ, ಮಾಜಿ ಶಾಸಕ ಬಾಲ್‍ರಾಜ್, ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷ ಯೋಗೇಶ್, ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ಶಿವನಾಂದ್, ನಗರಸಭೆ ಸದಸ್ಯರು ರಮೇಶ್, ಅಕ್ಮಲ್, ಹರ್ಷ, ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಚೇತನ್‍ದೊರೆರಾಜ್, ಮುಖಂಡರುಗಳಾದ ಕಿನಕಳ್ಳಿ ರಾಚಯ್ಯ, ಡಿ.ಸಿದ್ದರಾಜು ಸೇರಿದಂತೆ ತಾ. ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾ.ಪಂ. ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದರು.







