ಮಾ.26ರಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ: ಸಚಿವ ತನ್ವೀರ್ ಸೇಠ್
ಎಪ್ರಿಲ್ ಕೊನೆಯ ವಾರದಲ್ಲಿ ಫಲಿತಾಂಶ

ಬೆಂಗಳೂರು, ಮಾ. 20: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮೌಲ್ಯಮಾಪನವು ಮಾ.26ರಂದು ಆರಂಭವಾಗಲಿದ್ದು, ಎಪ್ರಿಲ್ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಮಂಗಳವಾರ ಮಲ್ಲೇಶ್ವರಂನ ಪದವಿ ಪೂರ್ವ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 53 ಕೇಂದ್ರಗಳಲ್ಲಿ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯಲಿದ್ದು, ಇದೇ ಮೊದಲ ಬಾರಿಗೆ ಕಲ್ಬುರ್ಗಿ ಜಿಲ್ಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ ಎಂದರು.
ಮೌಲ್ಯಮಾಪನ ಕಾರ್ಯವು 10ರಿಂದ 15 ದಿನಗಳ ವರೆಗೆ ನಡೆಯಲಿದೆ. ಬೆಂಗಳೂರು ಉತ್ತರ-10, ಬೆಂಗಳೂರು ದಕ್ಷಿಣ-13, ಮೈಸೂರು-8, ಧಾರವಾಡ-3, ಶಿವಮೊಗ್ಗ-2, ದಾವಣಗೆರೆ-2, ಕಲಬುರ್ಗಿ-2, ಮಂಗಳೂರು-7 ಹಾಗೂ ಬೆಳಗಾವಿ- 6 ಸೇರಿದಂತೆ ಒಟ್ಟು 53 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
3779 ಉಪ ಮುಖ್ಯ ಮೌಲ್ಯಮಾಪಕರು, 20,111 ಸಹಾಯಕ ಮೌಲ್ಯಮಾಪಕರು ಸೇರಿದಂತೆ ಒಟ್ಟು 23,890 ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಈಗಾಗಲೇ ಮೌಲ್ಯಮಾಪನ ಕಾರ್ಯಕ್ಕೆ ನೇಮಕಾತಿ ಆದೇಶವನ್ನು ಕಳುಹಿಸಲಾಗಿದೆ ಎಂದು ತನ್ವೀರ್ ಸೇಠ್ ವಿವರಿಸಿದರು.
ಮೌಲ್ಯಮಾಪನ ಕೇಂದ್ರಗಳಲ್ಲಿ ಮಾ.22ರಂದು ವೀಕ್ಷಕರು, ಮಾ.24ರಂದು ಉಪಮುಖ್ಯ ಮೌಲ್ಯಮಾಪಕರು, 26ರಂದು ಸಹಾಯಕ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರತಿವರ್ಷ 18ರಿಂದ 19ಸಾವಿರ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಈ ಬಾರಿ ಮೌಲ್ಯಮಾಪನವನ್ನು ಆದಷ್ಟು ಚುರುಕುಗೊಳಿಸಲು ಹೆಚ್ಚು ಮೌಲ್ಯಮಾಪಕರಿಗೆ ನೇಮಕಾತಿ ಆದೇಶ ರವಾನಿಸಲಾಗಿದೆ ಎಂದು ತನ್ವೀರ್ ಸೇಠ್ ನುಡಿದರು.
ಪ್ರಶ್ನೆ ಪತ್ರಿಕೆಯನ್ನು ತಿದ್ದುಪಡಿ ಮಾಡುವ ಅವಕಾಶ ಈ ಬಾರಿ ಮುದ್ರಣ ಇಲಾಖೆಗೆ ನೀಡುವುದಿಲ್ಲ. ಇದೇ ಮೊದಲ ಬಾರಿಗೆ ಪ್ರಶ್ನೆಪತ್ರಿಕೆಗಳ ಕರಡನ್ನು ತಿದ್ದಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ಎಲ್ಲ ಕೀ ಉತ್ತರಗಳನ್ನು ವೆಬ್‌ಸೈಟ್ ಮೂಲಕ ಮುದ್ರಣ ಮಾಡುವ ಅಂತಿಮ ಪ್ರಕ್ರಿಯೆ ನಡೆದಿದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಪೂರಕ ಪರೀಕ್ಷೆಗಳಿಗೆ ಶುಲ್ಕ ಪಾವತಿಸಲು ಸರದಿ ಸಾಲು ನಿಲ್ಲುವ ಪದ್ಧತಿಗೆ ಕೊನೆ ಹಾಡುವ ದೃಷ್ಟಿಯಿಂದ ಆನ್‌ಲೈನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತನ್ವೀರ್ ಸೇಠ್ ವಿವರ ನೀಡಿದರು. ಗೋಷ್ಠಿಯಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕ ಶಿಖಾ ಉಪಸ್ಥಿತರಿದ್ದರು.
‘ಮಾ.23ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಎಪ್ರಿಲ್ 6ರ ವರೆಗೆ ನಡೆಯಲಿದೆ. ಈ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಬೇನಾಮಿ ವಿದ್ಯಾರ್ಥಿಗಳು ಹಾಗೂ ನಕಲು ಮಾಡುವುದನ್ನು ಪತ್ತೆಹಚ್ಚಲು ಪರೀಕ್ಷಾ ಕೇಂದ್ರಗಳಲ್ಲಿ ನೂರಕ್ಕೆ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ
-ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ







