ರಸ್ತೆ-ನದಿಗಳ ಅಭಿವೃದ್ಧಿಯಿಂದ ಶಕ್ತಿಶಾಲಿ ದೇಶ ನಿರ್ಮಾಣ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಬೆಳಗಾವಿ, ಮಾ.20: ರಸ್ತೆಗಳ ಅಭಿವೃದ್ಧಿ ಮತ್ತು ನದಿಗಳ ಅಭಿವೃದ್ಧಿಯಿಂದ ಶಕ್ತಿಶಾಲಿ ದೇಶ ನಿರ್ಮಾಣ ಸಾಧ್ಯ ಎಂದು ಕೇಂದ್ರ ಸರಕಾರದ ರಸ್ತೆ ಸಾರಿಗೆ, ನೌಕಾಯಾನ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೊರವಲಯದಲ್ಲಿರುವ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 900 ಕೋಟಿ ರೂ.ಹೂಡಿಕೆಯೊಂದಿಗೆ 30 ಕಿ.ಮೀ ಉದ್ದವನ್ನು ಒಳಗೊಂಡ ಎನ್.ಎಚ್-4 (ಪ್ಯಾಕೇಜ್-1) ರ 0+000 ಕಿ.ಮೀ. ದಿಂದ 30+800 ಕಿ.ಮೀ.ವರೆಗೆ ಬೆಳಗಾವಿ-ಖಾನಾಪೂರ ಸೆಕ್ಷನ್‌ನ 4 ಲೇನ್ ನಿರ್ಮಾಣ ಮತ್ತು 500 ಕೋಟಿ ರೂ.ವೆಚ್ಚದಲ್ಲಿ 52 ಕಿ.ಮೀ ಉದ್ದದ ಎನ್.ಎಚ್-4(ಪ್ಯಾಕೇಜ್-2)ರ ಖಾನಾಪೂರದಿಂದ ಕರ್ನಾಟಕ/ಗೋವಾ ಗಡಿವರೆಗಿನ 30+800 ಕಿ.ಮೀ. ದಿಂದ 70+800 ಕಿ.ಮೀ.ವರೆಗೆ ಹಾಸಿದ ಅಚ್ಚುಗಳೊಂದಿಗೆ 2ಲೇನ್ ನಿರ್ಮಾಣ ಮತ್ತು 70+800 ಕಿ.ಮೀ. ದಿಂದ 84+120 ಕಿ.ಮೀ. ವರೆಗೆ ಹಾಸಿದ ಅಚ್ಚುಗಳಿಲ್ಲದ 2ಲೇನ್ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ರಸ್ತೆಗಳನ್ನು ಉತ್ತಮ ಗುಣಮಟ್ಟದ ಸಿಮೆಂಟ್ ಕಾಂಕ್ರೀಟನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ ಇದರಿಂದ ಸುಮಾರು ಎರಡು ಮೂರು ತಲೆಮಾರಿನವರೆಗೂ ರಸ್ತೆಗಳು ಯಾವುದೇ ರೀತಿಯಿಂದ ಹಾಳಾಗುವುದಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದರು. ದೇಶದ ಸಮಗ್ರವಾದ ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿ ಒಟ್ಟು 12 ಎಕ್ಸ್‌ಪ್ರೆಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನೇಪಾಳ ಮತ್ತು ಚೀನಾ ಮಾರ್ಗವಾಗಿ ಹೊಸ ರಸ್ತೆಯನ್ನು ನಿರ್ಮಿಸಲು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.
ನೀರಿನ ಸಮಸ್ಯೆಯನ್ನು ತಗ್ಗಿಸಲು ಸುಮಾರು 2 ಲಕ್ಷ ಕೋಟಿ ರೂ.ವೆಚ್ಚದಲ್ಲಿ ಸಮುದ್ರ ನೀರನ್ನು ಶುದ್ಧೀಕರಣ ಮಾಡಿ ಕುಡಿಯಲು ಮತ್ತು ರೈತರಿಗೆ ಅನೂಕುಲವಾಗುವಂತೆ ಸಮುದ್ರ ನೀರನ್ನು ವಿವಿಧ ನದಿಗಳಿಗೆ ಜೋಡಣೆ ಕಾಮಗಾರಿಗೆ ನಮ್ಮ ಸರಕಾರ ಹೆಚ್ಚು ಒತ್ತು ನೀಡುತ್ತಿದೆ ಎಂದು ಅವರು ಹೇಳಿದರು.
ಸಂಸದರಾದ ಸುರೇಶ್ ಅಂಗಡಿ ಮಾತನಾಡಿ, ಬೆಳಗಾವಿಯಿಂದ ಯರಗಟ್ಟಿ ಮತ್ತು ಬಾಗಲಕೋಟೆ ಮಾರ್ಗವಾಗಿ ಹೈದ್ರಾಬಾದ್ ವರೆಗೆ ಎನ್‌ಎಚ್-4 ರಸ್ತೆಯನ್ನು ನಿರ್ಮಾಣ ಮಾಡವ ಅವಶ್ಯವಿದೆ ಎಂದು ನಿತಿನ್‌ಗಡ್ಕರಿಗೆ ಒತ್ತಾಯಿಸಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕ ಸಂಜಯ ಪಾಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸದರಾದ ಪ್ರಭಾಕರ್ ಕೋರೆ, ಮಹಾಂತೇಶ ಕವಟಗಿಮಠ, ಶಾಸಕ ಉಮೇಶ್ ಕತ್ತಿ, ಜಿಲ್ಲಾಧಿಕಾರಿ ಎಸ್.ಝಿಯಾವುಲ್ಲಾ ಸೇರಿದಂತೆ ಇನ್ನಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.







