ಬೆಂಗಳೂರು ಹೆಸರಿಗೆ ಮಸಿ ಬಳಿಯುತ್ತಿರುವ ಬಿಜೆಪಿ: ದಿನೇಶ್ ಗುಂಡೂರಾವ್
‘ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ಕಿರುಹೊತ್ತಿಗೆ ಬಿಡುಗಡೆ

ಬೆಂಗಳೂರು, ಮಾ.20: ರಾಜ್ಯದ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯಾನನಗರಿ, ಐಟಿಬಿಟಿ ತವರು, ಸಿಲಿಕಾನ್ ವ್ಯಾಲಿ, ನವೋದ್ಯಮಗಳ ತವರು, ವಿಶ್ವದ ಅತ್ಯಂತ ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಪ್ರತಿಪಕ್ಷ ಬಿಜೆಪಿ ‘ಬೆಂಗಳೂರು ರಕ್ಷಿಸಿ’ ಎಂಬ ಪಾದಯಾತ್ರೆ ಮೂಲಕ ನಗರದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಅಪರಾಧ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಸುಳ್ಳು ಹೇಳುವ ಮೂಲಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ನಗರಕ್ಕೆ ಅಗೌರವ ತರುತ್ತಿದ್ದಾರೆ ಎಂದು ಕಿಡಿಗಾರಿದರು.
ಬಿಜೆಪಿಯವರು ನಡೆಸುತ್ತಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆಯ ವಿರುದ್ಧ, ನಗರದ ಜನತೆಗೆ ನಮ್ಮ ಸರಕಾರದಲ್ಲಿ ಬೆಂಗಳೂರಿಗೆ ನೀಡಿರುವ ಕೊಡುಗೆಗಳು, ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸತ್ಯ ಮಾಹಿತಿ ಒದಗಿಸಲು ‘ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ಪಾದಯಾತ್ರೆಗೆ ಮಾ.21ರಂದು ಸಂಜೆ 4 ಗಂಟೆಗೆ ಕೆ.ಆರ್.ಪುರದಲ್ಲಿ ಚಾಲನೆ ನೀಡಲಿದ್ದೇವೆ. ಅಲ್ಲದೆ, ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಲಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಎಂಬ ಕೈಪಿಡಿಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ದುರಾಡಳಿತ, ಭ್ರಷ್ಟಾಚಾರ, ಕಳಂಕಗಳ ಪಟ್ಟಿಯನ್ನು ಅನಾವರಣಗೊಳಿಸಿದ್ದೇವೆ. ಬಿಜೆಪಿಯವರು ನಮ್ಮ ವಿರುದ್ಧ ಮಾಡಿರುವ ಸುಳ್ಳು ಆರೋಪಗಳಿಗೆ ಉತ್ತರಿಸುವ ಅಂಕಿ ಅಂಶಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ನಡೆಯಲಿರುವ ಯಾತ್ರೆಯು ನಗರದ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಹಾಗೂ ಸಾರ್ವಜನಿಕ ಸಭೆಗಳ ಮೂಲಕ ನಡೆಯಲಿದೆ. ಯಾತ್ರೆಯ ಆರಂಭದ ಘೋಷಣೆಯ ಭಾಗವಾಗಿ ವಿಶೇಷ ವೆಬ್‌ಸೈಟ್ http://nammabengaluru.nammasarkara.in ಸಿದ್ಧಪಡಿಸಲಾಗಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು. ನಮ್ಮ ಸರಕಾರದ ಅವಧಿಯಲ್ಲಿ ಟೆಂಡರ್‌ಶ್ಯೂರ್ ರಸ್ತೆಗಳು, ಇಂದಿರಾ ಕ್ಯಾಂಟೀನ್, ಉತ್ತಮ ಸಾರಿಗೆ, ನಮ್ಮ ಮೆಟ್ರೊ, ವೈಟ್‌ಟಾಪಿಂಗ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಿಜೆಪಿ ಅವಧಿಯಲ್ಲಿ ಬಿಡಿಎ ಮೂಲಕ ಒಂದು ನಿವೇಶನ ನೀಡಲು ಸಾಧ್ಯವಾಗಿಲ್ಲ. ಆದರೆ, ನಾವು ಬಡವರಿಗೆ 1 ಲಕ್ಷ ಮನೆಗಳನ್ನು ಕಟ್ಟಿಸುತ್ತಿದ್ದು, ಸಾವಿರಾರು ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಕಿರುಹೊತ್ತಿಗೆ ಬಿಡುಗಡೆ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಜೆಪಿ ಅವಧಿಯಲ್ಲಿ ಬೆಂಗಳೂರು ಸ್ಥಿತಿ ಹದಗೆಟ್ಟಿತ್ತು. ಮಳೆಯ ಅನಾಹುತವನ್ನು ತಡೆಯಲು ಯಾವುದೆ ಕಾರ್ಯಕ್ರಮ ರೂಪಿಸಿರಲಿಲ್ಲ. ರಸ್ತೆಗಳ ಸಮಸ್ಯೆಯನ್ನು ಬಗೆಹರಿಸಲಿಲ್ಲ, ಮಂಡೂರಿನಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯವಿಲೇವಾರಿ ಮಾಡಿದ್ದೆ ಅವರ ಸಾಧನೆ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿನ ಕಸದ ಸಮಸ್ಯೆಯು ವಿದೇಶಿ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಕಸದ ಗುತ್ತಿಗೆದಾರರ ಮಾಫಿಯಾ ನಡೆಯುತ್ತಿತ್ತು, ಪೌರ ಕಾರ್ಮಿಕರಿಗೆ ಕನಿಷ್ಟ ವೇತನ ನೀಡುತ್ತಿರಲಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕಿ ಪೌರಕಾರ್ಮಿಕರಿಗೆ ಗರಿಷ್ಠ ವೇತನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ತ್ಯಾಜ್ಯನೀರು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿಗೆ ಘಟಕಗಳನ್ನು ಆರಂಭಿಸಿದ್ದೇವೆ, ತ್ಯಾಜ್ಯನೀರು ಶುದ್ಧೀಕರಣ ಘಟಕ ಗಳನ್ನು ಆರಂಭಿಸಲಾಗಿದೆ. ಬೆಂಗಳೂರಿನ ಕೆರೆಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಲಾಗಿದೆ. ನಮ್ಮ ಮೆಟ್ರೋ ಮೊದಲನೆ ಹಂತ ಪೂರ್ಣಗೊಳಿಸಲಾಗಿದ್ದು, ಎರಡನೆ ಹಂತವು ಅಂತಿಮ ಹಂತದಲ್ಲಿದೆ ಎಂದು ಜಾರ್ಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಕೃಷ್ಣಭೈರೇಗೌಡ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕ ಭೈರತಿ ಬಸವರಾಜ, ವಿಧಾನಪರಿಷತ್ ಸದಸ್ಯ ರಿಝ್ವಿನ್ ಅರ್ಶದ್ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.
ಬಿಜೆಪಿಯವರಿಗೆ ಕೆಂಪೇಗೌಡ ಪ್ರಶಸ್ತಿ !
ಬಿಜೆಪಿ ಅವಧಿಯಲ್ಲಿ ಬಿಬಿಎಂಪಿ ಸಾಲದ ಕೂಪಕ್ಕೆ ಸಿಲುಕಿತ್ತು. 8500 ಕೋಟಿ ರೂ.ಸಾಲ ಮಾಡಲಾಗಿತ್ತು, ಬಿಬಿಎಂಪಿ ಆಸ್ತಿಗಳನ್ನು ಅಡಮಾನ ಇಡಲಾಗಿತ್ತು. ಪಾಲಿಕೆಯ ಅಧಿಕಾರಿಗಳು, ಕಚೇರಿಯ ಫೋನ್ ಬಿಲ್ ಕಟ್ಟಲು ಅವರ ಬಳಿ ದುಡ್ಡು ಇದ್ದಿಲ್ಲ. ಬಿಜೆಪಿಯವರು ಬೆಂಗಳೂರು ನಗರವನ್ನು ಹಾಳು ಮಾಡಿದ್ದಕ್ಕೆ ಈ ಬಾರಿ ಅವರಿಗೆ ಕೆಂಪೇಗೌಡ ಪ್ರಶಸ್ತಿ ಕೊಡಿಸಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಯಾಗಿದ್ದರು. ಆಗ ಒಂದು ದಿನವು ನಗರ ಪ್ರದಕ್ಷಿಣೆ ಮಾಡಿಲ್ಲ. ಆದರೆ, ಮೊನ್ನೆ ಇದಕ್ಕಿದ್ದಂತೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನಿತರರು ಸ್ಲಂನಲ್ಲಿ ವಾಸ್ತವ್ಯ ಮಾಡಿದ್ದಾರೆ.
-ರಾಮಲಿಂಗಾರೆಡ್ಡಿ, ಗೃಹ ಸಚಿವ







