ಒಳಿತಿನ ಹಾದಿಗೆ ವ್ಯಯಿಸುವ ಹೆಜ್ಜೆಗಳು ಮಹತ್ತರವಾದುದು: ಬಿ.ಎಂ.ಫಾರೂಖ್

ಬೆಂಗಳೂರು, ಮಾ.20: ಮಾನವೀಯತೆ ಸತ್ತು ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಾನವೀಯತೆಗೆ ಒತ್ತು ಕೊಡುವ ಕೆಲಸಗಳು ಆಗಬೇಕಾಗಿದೆ. ಒಳಿತಿನ ಹಾದಿಗೆ ವ್ಯಯಿಸುವ ಹೆಜ್ಜೆಗಳು ಮಹತ್ತರವಾದುದು ಎಂದು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಖ್ ತಿಳಿಸಿದರು. ಇಲ್ಲಿನ ಜಯನಗರ ಈದ್ಗಾ ಮೈದಾನದಲ್ಲಿ ಎಂ.ಎಂ.ವೈ.ಸಿ.ಬೆಂಗಳೂರು ಹಮ್ಮಿಕೊಂಡಿದ್ದ ಐದನೇ ವಾರ್ಷಿಕೋತ್ಸವ ಸಮಾವೇಶದಲ್ಲಿ ತಾವು ಕೊಡುಗೆ ನೀಡಿದ ಆಂಬ್ಯುಲೆನ್ಸ್ ವಾಹನವನ್ನು ಸಮಾಜಕ್ಕೆ ಸಮರ್ಪಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತಾಡಿದ ಸಹದಿಯ ಫೌಂಡೇಷನ್ ಅಧ್ಯಕ್ಷ ಶಾಫಿ ಸಹದಿ, ಎಂ.ಎಂ.ವೈ.ಸಿ ಕಾರ್ಯ ವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಖ್ಯಾತ ಭಾಷಣಗಾರ ನೌಶಾದ್ ಬಾಖವಿ ತಿರುವನಂತಪುರಂ ‘ಕುರ್‌ಆನ್ ಆಗಿದೆ ಗೆಳೆಯ’ಎಂಬ ವಿಚಾರದಲ್ಲಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಆಯ್ದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಮಾಡಲಾಯಿತು. ಮುಝಮ್ಮಿಲ್ ತಂಙಳ್ ಕಾಸರಗೋಡು, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷ, ಕೆಪಿಸಿಸಿ ಕಾರ್ಯದರ್ಶಿ ಗುಲ್ಶಾದ್ ಅಹ್ಮದ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಎಂಎಂವೈಸಿ ಸ್ಥಾಪಕಾಧ್ಯಕ್ಷ ಎಚ್.ಅಬೂಬಕರ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಪಿ.ಕೆ.ಜುನೈದ್ ವಂದಿಸಿದರು, ಕೆಬಿಎಸ್ ನೌಫಲ್ ಕಾರ್ಯಕ್ರಮ ನಿರೂಪಿಸಿದರು.





