ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೈಕಮಾಂಡಿಗೆ ಬಿಟ್ಟದ್ದು: ಮೊಯ್ಲಿ

ಉಡುಪಿ, ಮಾ.20: ಕಾಂಗ್ರೆಸ್ ಶಾಸಕರು ಇರುವ ಜಿಲ್ಲೆಯ ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಸಕರಿಲ್ಲದ ಕಾರ್ಕಳ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ತೆಂಕಎರ್ಮಾಳಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಸಭೆಯಲ್ಲಿ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಹೈಕಮಾಂಡಿಗೆ ಬಿಡಬೇಕು ಎಂಬ ಬಗ್ಗೆ ನಿರ್ಧಾರ ಆಗಿದೆ. ನಾವು ಯಾರಿಗೂ ಲಾಬಿ ಮಾಡುತ್ತಿಲ್ಲ. ಸದ್ಯ ಬಿಜೆಪಿ ಕೈಯಲ್ಲಿರುವ ಕಾರ್ಕಳ ಕ್ಷೇತ್ರವನ್ನು ಕಾಂಗ್ರೆಸ್ ಪರ ಮಾಡಿಕೊಳ್ಳುವ ಪ್ರಯತ್ನವನ್ನು ನಾವು ಒಗ್ಗಟ್ಟಾಗಿ ಮಾಡುತ್ತೇವೆ. ಕಾಂಗ್ರೆಸ್ ನಲ್ಲಿ ಕ್ಷೇತ್ರ, ಜಿಲ್ಲೆಗೆ ಎಂಬ ಪ್ರತ್ಯೇಕ ಹೈಕಮಾಂಡ್ ಇಲ್ಲ ಎಂದರು.
ಟ್ವೀಟ್ ಸಂಬಂಧ ಕುರಿತ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಈ ಬಗ್ಗೆ ನೋಟಿಸ್ ಏನು ಇಲ್ಲ. ಅದು ನಮ್ಮ ಪಕ್ಷದ ಒಳಗಿನ ವಿಚಾರ. ಆ ಬಗ್ಗೆ ನಾನು ಮತ್ತು ಹರ್ಷ ಈಗಾಗಲೇ ತಿಳಿಸಿದ್ದೇವೆ. ಇದು ಅನಧಿಕೃತ ಮತ್ತು ಅದನ್ನು ಡಿಲೀಟ್ ಮಾಡಿದ್ದೇವೆ. ಅದಕ್ಕೆ ಸಾಕ್ಷಿ ಕೂಡ ಇದೆ. ಇದರಿಂದ ಪಕ್ಷಕ್ಕೆ ಯಾವುದೇ ಹಾನಿ ಆಗಿಲ್ಲ. ಇದು ನಮ್ಮ ಹೇಳಿಕೆ ಅಲ್ಲ. ಆ ಬಗ್ಗೆ ಸಾಕ್ಷ್ಯ ಕೂಡ ನಮ್ಮಲ್ಲಿ ಇದೆ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಇದು 13ನೆ ಶತಮಾನದಿಂದ ನಡೆದುಕೊಂಡು ಬಂದ ಹೋರಾಟ. ಇದು ಹಿಂದುಳಿದವರ ಹೋರಾಟ ಧ್ವನಿ. ಹೊಸದಾಗಿ ಗುರುತಿಸಿರುವ ಹೋರಾಟ ಅಲ್ಲ. ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ಗುರುತಿಸಿರುವುದರಿಂದ ವೀರಶೈವರನ್ನು ನಿರ್ಲಕ್ಷ ಮಾಡಿದಾಗೆ ಆಗುವುದಿಲ್ಲ. ಅವರಿಗೂ ವಿಶೇಷ ಗೌರವ ನೀಡಿದಂತೆ ಆಗುತ್ತದೆ. ಇದರಲ್ಲಿ ರಾಜಕೀಯ ಪ್ರಶ್ನೆ ಬರಲ್ಲ ಎಂದು ತಿಳಿಸಿದರು.
ರಾಹುಲ್ ಗಾಂಧಿ ಕಾರ್ಯಕ್ರಮ ರದ್ದಾಗಿರುವುದರಿಂದ ಮಠಕ್ಕೆ ಹೋಗಲು ಅವರಿಗೆ ಆಗಿಲ್ಲ. ಉಡುಪಿ ಕ್ಷೇತ್ರಕ್ಕೆ ಬಂದಿದ್ದರೆ ಅವರು ಖಂಡಿತ ಮಠಕ್ಕೆ ಭೇಟಿ ನೀಡುತ್ತಿದ್ದರು. ರಾಹುಲ್ ಗಾಂಧಿಗೆ ಯಾವುದೇ ಧರ್ಮ ಜಾತಿಯ ಭೇದ ಇಲ್ಲ. ರಾಜಕೀಯಕ್ಕಾಗಿ ಧರ್ಮವನ್ನು ಪ್ರೋತ್ಸಾಹಿಸುವ ಸಂಸ್ಕೃತಿ ಕಾಂಗ್ರೆಸ್‌ನದ್ದಲ್ಲ ಎಂದರು.







