ಪೆರಿಯಾರ್ ಪ್ರತಿಮೆ ದ್ವಂಸಕ್ಕೆ ಸೂಚನೆ ನೀಡಿದ್ದು ಆರೆಸ್ಸೆಸ್ : ರಾಹುಲ್ ಗಾಂಧಿ ಆರೋಪ

ಹೊಸದಿಲ್ಲಿ, ಮಾ.20: ಹಿಂದುತ್ವ ಸಿದ್ಧಾಂತವನ್ನು ವಿರೋಧಿಸುವವರ ಪ್ರತಿಮೆಯನ್ನು ದ್ವಂಸಗೊಳಿಸಿ ಎಂದು ಆರೆಸ್ಸೆಸ್ ಮತ್ತು ಬಿಜೆಪಿ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ ಮೇರೆಗೆ ಪೆರಿಯಾರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಯನ್ನು ದ್ವಂಸಗೊಳಿಸಲು ಆರೆಸ್ಸೆಸ್ ಮತ್ತು ಬಿಜೆಪಿ ಪ್ರೋತ್ಸಾಹಿಸಿದೆ. ಅದೇ ರೀತಿ ತಮಿಳುನಾಡಿನ ಶ್ರೇಷ್ಠ ಸಮಾಜ ಸುಧಾರಕ , ದಲಿತರಿಗಾಗಿ ಹೋರಾಡಿದ ಪೆರಿಯಾರ್ ಪ್ರತಿಮೆಯನ್ನೂ ದುಷ್ಟ್ರೇರಣೆಯಿಂದ ದ್ವಂಸಗೊಳಿಸಲಾಗಿದೆ ಎಂದು ರಾಹುಲ್ ಆರೋಪಿಸಿದರು.
ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಅಳಂಗುಡಿ ಎಂಬಲ್ಲಿ ಪೆರಿಯಾರ್ ಅವರ ಪ್ರತಿಮೆಯ ದ್ವಂಸ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿತ್ತು. ಸೋಮವಾರ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಲ್ಲೋರ್‌ನಲ್ಲಿ ಬಿಜೆಪಿಯ ಸ್ಥಳೀಯ ಘಟಕದ ಕಾರ್ಯದರ್ಶಿ ಹಾಗೂ ಆತನ ಕೆಲವು ಸಂಬಂಧಿಕರು ಮಾರ್ಚ್ 7ರಂದು ಪೆರಿಯಾರ್ ಪ್ರತಿಮೆಯ ಮೇಲೆ ಕಲ್ಲೆಸೆದು ಹಾನಿಗೊಳಿಸಿದ್ದರು. ಇದಕ್ಕೂ ಮೊದಲು ತಮಿಳುನಾಡಿನ ಹಿರಿಯ ಬಿಜೆಪಿ ಮುಖಂಡ ಎಚ್.ರಾಜ ಅವರು ಪೆರಿಯಾರ್ ಪ್ರತಿಮೆಯನ್ನು ಹಾನಿಗೊಳಿಸುವ ಕೃತ್ಯವನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು.







