ಆಪ್ ಪಟ್ಟಿ ಬಿಡುಗಡೆ: ಜನ-ಸಾಮಾನ್ಯರಿಗೆ ಟಿಕೆಟ್
ರಾಜ್ಯ ವಿಧಾನಸಭಾ ಚುನಾವಣೆ

ಬೆಂಗಳೂರು, ಮಾ.20: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ(ಎಎಪಿ) 18 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಆಪ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಬಿಡುಗಡೆ ಮಾಡಿದ್ದು, ಆಟೊ ಚಾಲಕ ಸೇರಿದಂತೆ ಸಾಮಾನ್ಯ ವರ್ಗದವರನ್ನೇ ಗುರಿಯಾಗಿಸಿಕೊಂಡು ಟಿಕೆಟ್ ನೀಡಲಾಗಿದೆ.
ಬಳಿಕ ಚುನಾವಣೆ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಒಂದನೇ ಸ್ಥಾನ ತಲುಪಿದೆ. ಅದೇ ರೀತಿ, ರೈತರ ಆತ್ಮಹತ್ಯೆ ಪ್ರಕರಣಗಳು ಮತ್ತು ಅಪರಾಧ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಆದರೆ, ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಆರೋಪಿಸಿದರು.
ಮೂರು ವರ್ಷಗಳಿಂದ ದೆಹಲಿಯಲ್ಲಿ ನಮ್ಮ ಪಕ್ಷದ ಆಡಳಿತ, ಶಿಕ್ಷಣ, ಸಾರ್ವಜನಿಕ ಆರೋಗ್ಯ ವಲಯದಲ್ಲಿ ಮಾಡಿರುವ ಕೆಲಸ ನಮಗೆ ಆತ್ಮಸ್ಥೈರ್ಯ ತುಂಬಿದೆ. ಪಕ್ಷದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಮೇಲೆ ಯಾವುದೇ ಭ್ರಷ್ಟಾಚಾರ, ಅಪರಾಧ ಹಾಗೂ ಕೋಮುವಾದದ ಆರೋಪವಿಲ್ಲ. ಜನರ ಸಮಸ್ಯೆ ಅರಿತು ಪರಿಹಾರಕ್ಕಾಗಿ ಹೋರಾಡುತ್ತಿದ್ದಾರೆ. ಇವರು ಮುಂಬರುವ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯಲ್ಲಿ ಜನರ ಧ್ವನಿಯಾಗಿ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎನ್ನುವ ಭರವಸೆ ಇದೆ ಎಂದು ನುಡಿದರು.
ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮಾತನಾಡಿ, ನಮ್ಮ ಪಕ್ಷ ಭ್ರಷ್ಟಾಚಾರ ನಿಯಂತ್ರಣಕ್ಕೆ ಪ್ರಥಮ ಆದ್ಯತೆ ನೀಡಲಿದೆ. ನಾವು ಜಾತಿ, ಧರ್ಮದ ವಿಷಯ ಮಾತನಾಡುವುದಿಲ್ಲ. ಜನರನ್ನು ಒಡೆಯುವ ವಿಷಯ ಚರ್ಚೆ ಮಾಡುವುದಿಲ್ಲ. ದೆಹಲಿಯಲ್ಲಿ ಪಕ್ಷದ ಮಾದರಿ ಆಡಳಿತ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಗೆ ಹೇಗೆ ವಿಶ್ವ ಮನ್ನಣೆ ಬಂದಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂ ಹೇಳಿದರು.
ಆರೆಸ್ಸೆಸ್ ಅವರು ಸ್ವದೇಶಿ ವಸ್ತುಗಳನ್ನು ಖರೀದಿಸಿ ಎಂದು ಮನೆ ಮನೆಗೆ ಕರಪತ್ರ ಹಂಚುತ್ತಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದರು. ವಿದೇಶದಲ್ಲಿ ಇರಿಸಿರುವ ಕಪ್ಪು ಹಣವನ್ನು ವೈಟ್ ಮಾಡಿಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಒಂದಾಗಿ 1976ರ ಕಾಯ್ದೆಗೆ ತಿದ್ದುಪಡಿ ಮಾಡಿಕೊಂಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸ್ವಚ್ಛ ಪರ್ಯಾಯ ಆಡಳಿತ ನೀಡಲಿದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಗುರಿ ಆಪ್‌ಗೆ ಇದೆ. ಈ ಸಂಬಂಧ ಸರ್ಚಿಂಗ್ ಕಮಿಟಿ ಸೂಕ್ತ ಅಭ್ಯರ್ಥಿಗಳ ಪೂರ್ವಾಪರ ವಿಚಾರಿಸುತ್ತಿದೆ. ಪಕ್ಷದ ಮಾನದಂಡಕ್ಕೆ ಸರಿ ಹೊಂದುವ ವ್ಯಕ್ತಿಗಳನ್ನೆ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತೇವೆ. ಪಂಜಾಬ್‌ನ ಇತ್ತೀಚಿನ ಬೆಳವಣಿಗೆ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಅಭ್ಯರ್ಥಿಗಳ ವಿವರ
ಆಟೊ ಚಾಲಕರ ಮುಖಂಡನಾಗಿರುವ ಅಯೂಬ್ ಖಾನ್- ಶಿವಾಜಿನಗರ, ಆಪ್ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ- ಸರ್ವಜ್ಞನಗರದ, ನಿವೃತ್ತ ಐಎಎಸ್ ಅಧಿಕಾರಿ ಡಾ.ರೇಣುಕಾ ವಿಶ್ವನಾಥನ್- ಶಾಂತಿನಗರ, ಉದ್ಯಮಿ ಲಿಂಗರಾಜ್ ಅರಸ್- ಕೆ.ಆರ್‌ಪುರಂ, ಸೆಯ್ಯದ್ ಅಸದ್ ಅಬ್ಬಾಸ್- ಬಿಟಿಎಂ ಬಡಾವಣೆ ಅಭ್ಯರ್ಥಿ.
ಎಸ್.ಜಿ.ಸೀತಾರಾಮ್-ಬಸವನಗುಡಿ, ರಾಘವೇಂದ್ರ ಥಾಣೆ-ಹೆಬ್ಬಾಳ, ಎಸ್.ಜಿ.ಸಿದ್ದಗಂಗಯ್ಯ-ಪುಲಕೇಶಿನಗರ, ಮೋಹನ್ ದಾಸರಿ-ಸಿ.ವಿ.ರಾಮನ್ ನಗರ, ಮಾಲವಿಕ ಗುಬ್ಬಿವಾಣಿ-ಚಾಮರಾಜ, ಸಂತೋಷ್ ನರಗುಂದ- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಕೆ.ಎಲ್.ರಾಘವೆಂದ್ರ-ದಕ್ಷಿಣ ದಾವಣಗೆರೆ ಅಭ್ಯರ್ಥಿ.
ದೀಪಕ್ ಮಾಲಗಾರ-ಬಸವ ಕಲ್ಯಾಣ, ಶರಣಪ್ಪ ಸಜ್ಜಿಹೋಳ-ಗಂಗಾವತಿ, ಬಾಳಾಸಾಹೇಬ ರಾವ್ ಸಾಹೇಬ-ಕಾಗವಾಡ, ರವಿಕುಮಾರ್-ಭದ್ರಾವತಿ, ಚಂದ್ರಕಾಂತ ರೇವಣಕರ್-ಶಿಕಾರಿಪುರ, ಆನಂದ ಹುಂಪಣ್ಣನವರ್-ಕಿತ್ತೂರು ಅಭ್ಯರ್ಥಿ







