ವಿಧಾನಸಭೆ ಚುನಾವಣೆ ಗೆಲುವಿಗೆ ಜೆಡಿಎಸ್ ಪ್ರಚಾರ ಕಾರ್ಯತಂತ್ರ
ಬೆಂಗಳೂರು, ಮಾ.20: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಸೋಲಿಸಿ, ಅಧಿಕಾರದ ಗದ್ದುಗೆ ಏರಲು ಶ್ರಮಿಸುತ್ತಿರುವ ಜೆಡಿಎಸ್, ತನ್ನ ಪ್ರಚಾರ ಕಾರ್ಯತಂತ್ರವನ್ನು ಚುರುಕುಗೊಳಿಸಿದೆ.
ಕಳೆದ 10 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿಯದ ಜೆಡಿಎಸ್‌ಗೆ 2018ರ ಚುನಾವಣೆಯು ಅಳಿವು ಉಳಿವಿನ ಹೋರಾಟವೂ ಹೌದು. ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಒಂದೊಂದೇ ರಾಜಕೀಯ ದಾಳಗಳನ್ನ ಉರುಳಿಸುತ್ತಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಗತ್ಯವಿರುವ ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಜೆಡಿಎಸ್ ಪಂಚಸೂತ್ರಗಳನ್ನ ಸಿದ್ಧಪಡಿಸಿದೆ. ಅದರಲ್ಲೂ ಆ ಪಂಚಸೂತ್ರಗಳು ಜೆಡಿಎಸ್‌ನ ಬ್ರಹ್ಮಾಸ್ತ್ರ ಅಂತಾನೇ ಬಣ್ಣಿಸಲಾಗುತ್ತಿದೆ.
ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್‌ವೇರ್: ಡಿಜಿಟಲ್ ಯುಗದಲ್ಲಿ ಭಿನ್ನ ಮಾರ್ಗದಲ್ಲಿ ಮತದಾರರ ಮನ ಗೆಲ್ಲಬೇಕು ಅನ್ನೋದನ್ನ ಮನಗಂಡಿರುವ ಜೆಡಿಎಸ್ ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್‌ವೇರ್ ಮೊರೆ ಹೋಗಿದೆ. ಈ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ಡಿಜಿಟಲ್ ಮಾಹಿತಿ ಸಂಗ್ರಹಿಸುತ್ತಿದೆ.
ಇಂಟಲಿಜೆನ್ಸ್ ಸಾಫ್ಟ್‌ವೇರ್‌ನಲ್ಲಿ ಕಳೆದ 4 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಯಾರು ಅಭ್ಯರ್ಥಿಗಳಾಗಿದ್ದರು? ಜೆಡಿಎಸ್ ಅಭ್ಯರ್ಥಿಗೆ ಬಿದ್ದ ಮತಗಳೆಷ್ಟು? ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಹೆಚ್ಚಾದ ಮತಗಳ ಸಂಖ್ಯೆಯೆಷ್ಟು? ಎಲ್ಲೆಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಕಡಿಮೆ ಇದೆ? ಯಾವ ಯಾವ ಕ್ಷೇತ್ರಗಳಲ್ಲಿ ಶಕ್ತಿ ಶಾಲಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪ್ರತ್ಯೇಕವಾಗಿ ಕಲೆ ಹಾಕಿ ವಿಶ್ಲೇಷಿಸಲಾಗುತ್ತದೆ. ಆ ಲೆಕ್ಕಾಚಾರದ ಮೇಲೆ ಚುನಾವಣಾ ತಂತ್ರಗಳನ್ನು ರೂಪಿಸಲಾಗುತ್ತದೆ.
ಇದೊಂದೇ ಅಲ್ಲ, ಪ್ರತಿ ಬೂತ್ ಮಟ್ಟದಲ್ಲೂ ಜೆಡಿಎಸ್ ಕಾರ್ಯಕರ್ತರ ತಂಡ ರಚಿಸಲಾಗುತ್ತಿದೆ. ಪ್ರತಿ ಮನೆ ಮನೆಗೆ ಹೋಗಿ ಜೆಡಿಎಸ್ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿಗೆ ಮತ ನೀಡಿ ಎಂದು ಮನವಿ ಮಾಡಬೇಕು. ಪ್ರತಿ ಮತದಾರನಿಗೆ ಈ ಬಾರಿ ಕುಮಾರಣ್ಣನಿಗೆ ಒಂದು ಅವಕಾಶ ನೀಡಿ ಎಂದು ಕೇಳಬೇಕು. ಆಗ ಮತದಾರರು ಏನು ಹೇಳುತ್ತಾರೊ ಆ ವಿಚಾರವನ್ನು ಪಕ್ಷದ ಕೇಂದ್ರ ಕಚೇರಿಗೆ ತಲುಪಿಸಬೇಕು. ಇದಕ್ಕಾಗಿ ಒಂದು ವಿಶಿಷ್ಟ ಆ್ಯಪ್ ಸಿದ್ಧಪಡಿಸಲಾಗಿದೆ.
ಎಲ್ಲ ಕಾರ್ಯಕರ್ತರು ಮೊಬೈಲ್ನಲ್ಲಿ ಅಳವಡಿಸಿಕೊಳ್ಳಬೇಕು. ಆ್ಯಪ್ ಮೂಲಕ ಮತದಾರರ ಅಭಿಪ್ರಾಯ ತಲುಪಿಸಬೇಕು ಹಾಗೂ ಅವರ ಮೊಬೈಲ್ ನಂಬರ್ ಕೂಡಾ ಆ್ಯಪ್ ಮೂಲಕ ಕಳುಹಿಸಬೇಕು. ಹೀಗೆ ಸಂಗ್ರಹಗೊಂಡ ಅಭಿಪ್ರಾಯ ಹಾಗೂ ಮೊಬೈಲ್ ಸಂಖ್ಯೆಗಳು ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್‌ವೇರ್‌ಗೆ ಬಂದು ಸಂಗ್ರಹವಾಗುತ್ತದೆ. ಸಂಗ್ರಹಗೊಂಡ ಎಲ್ಲ ಮೊಬೈಲ್ ಸಂಖ್ಯೆಗಳಿಗೆ ಈ ಬಾರಿ ಕುಮಾರಣ್ಣ ಎಂಬ ಸಂದೇಶಗಳನ್ನು ಕಳಿಸಲಾಗುತ್ತದೆ.
ಸ್ಕೈ ಬಲೂನ್: ವಿಧಾನಸಭಾ ಕ್ಷೇತ್ರಗಳ ಪ್ರಮುಖ ಗಲ್ಲಿಗಳು, ಆಟದ ಮೈದಾನಗಳಲ್ಲಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಭಾವಚಿತ್ರವಿರುವ ಸ್ಕೈ ಬಲೂನ್ ಹಾರಿ ಬಿಡಲಾಗುತ್ತೆ. ಈ ಮೂಲಕ ಜನರನ್ನು ಪಕ್ಷದತ್ತ ಸೆಳೆಯೋದು ಇದರ ಹಿಂದಿನ ಉದ್ದೇಶ.
ವಾಟ್ಸಾಪ್ ಗ್ರೂಪ್: ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ವಾಟ್ಸಾಪ್ ಕೂಡಾ ಕಾರಣ ಆಗಿತ್ತು. ಬಿಜೆಪಿ ಲಕ್ಷಾಂತರ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸೋ ಮೂಲಕ ಪ್ರಚಾರ ನಡೆಸಿತ್ತು. ಇದೇ ಮಾದರಿ ತಂತ್ರವನ್ನು ಜೆಡಿಎಸ್ ಅನುಸರಿಸಿದೆ. ಬೂತ್ ಮಟ್ಟದ ಕಾರ್ಯಕರ್ತರನ್ನೊಳಗೊಂಡು ರಾಜ್ಯ ಮಟ್ಟದವರೆಗೂ ಸುಮಾರು 25 ಸಾವಿರ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ತಂದಿದ್ದ ಯೋಜನೆಗಳು, ಪ್ರಧಾನಿಯಾಗಿ ದೇವೇಗೌಡರು ಮಾಡಿದ ಕಾರ್ಯಗಳನ್ನು ವಾಟ್ಸಾಪ್‌ಗಳ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ವಿದ್ಯಾರ್ಥಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವೈದ್ಯರು, ವಕೀಲರು ಸೇರಿದಂತೆ ಸ್ಥಳೀಯ ಪ್ರಮುಖ ಮುಖಂಡರನ್ನು ವಾಟ್ಸಾಪ್ ಗ್ರೂಪ್‌ಗಳಿಗೆ ಸೇರಿಸಲಾಗುತ್ತದೆ.
ಎಸ್‌ಎಂಎಸ್ ಮತ್ತು ವಾಯ್ಸ ಎಸ್‌ಎಂಎಸ್: ಜೆಡಿಎಸ್ ಪಕ್ಷಕ್ಕೆ ಈ ಬಾರಿ ಮತ ನೀಡಿ ಎಂದು ಕುಮಾರಸ್ವಾಮಿ ವಿನಂತಿ ಮಾಡಿರುವ ಸಂದೇಶಗಳನ್ನು ಮತದಾರರ ಮೊಬೈಲ್ಗಳಿಗೆ ಕಳಿಸಲಾಗುತ್ತೆ.
ಟಾಕಿಂಗ್ ವೋಟರ್ ಸ್ಲಿಪ್: ಈ ಬಾರಿ ಜೆಡಿಎಸ್‌ನ ವೋಟರ್ ಸ್ಲಿಪ್ ಕೂಡ ಬಹಳ ವಿಭಿನ್ನವಾಗಿರಲಿದೆ. ಸ್ಲಿಪ್‌ಗಳ ಮೇಲೆ ಕುಮಾರಸ್ವಾಮಿ ಮತ್ತು ದೇವೆಗೌಡರ ಸಾಧನೆಗಳ ಆಕರ್ಷಕ ವಾಕ್ಯಗಳಿರುತ್ತವೆ. ಜೆಡಿಎಸ್‌ನ ಈ ಪಂಚಸೂತ್ರಕ್ಕೆ ಮತದಾರರು ಮಣೆ ಹಾಕುತ್ತಾರಾ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.







