ಚಿಕಿತ್ಸೆ ನೆರವಿಗೆ ಮನವಿ

ಬಂಟ್ವಾಳ, ಮಾ. 20: ಬಸ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೊರಾಟ ನಡೆಸುತ್ತಿರುವ ಕಂದೂರು ನಿವಾಸಿ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶರ್ಮಿಳಾ ಅವರ ಚಿಕಿತ್ಸಾ ನೆರವಿಗಾಗಿ ಆಕೆಯ ಪೋಷಕರು ಮನವಿ ಮಾಡಿದ್ದಾರೆ.
ಮಾರ್ಚ್ 14ರಂದು ಮಾಣಿ ಜಂಕ್ಷನ್ ಸರಕಾರಿ ಬಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಬಸ್ಸಿನೊಳಗಿದ್ದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶರ್ಮಿಳಾ (29) ಅವರು ತೀವ್ರ ಗಾಯಗೊಂಡು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಅಪಘಾತದಲ್ಲಿ ಬಸ್ ಪ್ರಯಾಣಿಕ ಮಹಿಳೆಯೊಬ್ಬರೂ ಸ್ಥಳದಲ್ಲೇ ಸಾವನ್ನಪಿದ್ದು, ಹಲವರು ಗಾಯಗೊಂಡಿದ್ದರು.
ಉಪ್ಪಿನಂಗಡಿಯ ಕಾಲೇಜಿನಿಂದ ಸರಕಾರಿ ಬಸ್‍ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಮಾಣಿಯಲ್ಲಿ ಈ ಘಟನೆ ಸಂಭವಿಸಿತ್ತು. ದೈಹಿಕವಾಗಿ ಕುಬ್ಜರಾಗಿರುವ ಸುಮಾರು 4ಅಡಿ ಎತ್ತರದ ಶರ್ಮಿಳಾ ಅವರು, ಬಸ್ ಅಪಘಾತಗೊಂಡು ಪಲ್ಪಿ ಹೊಡೆದಾಗ ಬಸ್‍ನೊಳಗೆ ರಾಡ್ಗೆ ಬಡಿದು ಸೀಟಿನ ಅಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದದನ್ನು ಯಾರು ಗಮನಿಸಿರಲಿಲ್ಲ. ಕಳೆದ 5 ದಿನಗಳಿಂದ ಎಜೆ ಆಸ್ಪತ್ರೆಯ ಐಸಿಯು ವೆಂಟಿಲೇಟರ್‍ನಲ್ಲಿ ಇದ್ದಾರೆ. ಅಪಘಾತದಿಂದ ಲಂಗ್ಸ್ ಮತ್ತು ಶ್ವಾಸಕೋಶಕ್ಕೆ ಗಂಭೀರ ಗಾಯವಾಗಿರುವ ಆಕೆಯ ಸ್ಥಿತಿ ಗಂಭೀರವಾಗಿದೆ. ಆರು ತಿಂಗಳ ಹಿಂದೆಯಷ್ಟ ಆಕೆಯ ತಂದೆ ಹೃದಯಾಘಾತದಿಂದ ನಿಧನ ಹೊಂದಿದ್ದರು.
ಪ್ರತಿಭಾವಂತೆ ಶರ್ಮಿಳಾ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೂರ್ಣ ವಿದ್ಯಾರ್ಥಿ ವೇತನದ ಉಚಿತ ಶಿಕ್ಷಣದಲ್ಲಿ ಪದವಿ ಪಡೆದು ಸಂತ ಆಗ್ನೇಸ್ ಕಾಲೇಜಿನಲ್ಲಿ ಸೈಕಾಲಜಿಯಲ್ಲಿ ಸ್ನಾತಕೋತರ ಪದವಿ ಪಡೆದು ಏಳು ತಿಂಗಳ ಹಿಂದೆಯಷ್ಟೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ
ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕರಾಗಿದ್ದರು. ಇಬ್ಬರು ಅವಳಿ ಸಹೋದರಿಯರು, ಒಬ್ಬ ಅಣ್ಣ ಮತ್ತು ತಾಯಿ ಈ ಕುಟುಂಬ ಮಾನಸಿಕವಾಗಿ ಜರ್ಜರಿತವಾಗಿದೆ. ಅಲ್ಲದೆ ಆಕೆಯ ಚಿಕಿತ್ಸೆಯ ವೆಚ್ಚದ ಬಗ್ಗೆಯು ಕೆಸ್ಸಾರ್ಟಿಸಿಯವರು ಯಾವುದೇ ಗಮನಹರಿಸಿಲ್ಲ. ಆಸ್ಪತ್ರೆಯ ಬಿಲ್ಲು ದಿನದಿಂದ ದಿನಕ್ಕೆ ಏರುತ್ತಿರುವುದು, ಈ ಬಡ ಕುಟುಂಬಕ್ಕೆ ಸವಾಲಾಗಿದೆ ಎಂದು ಅವರ ಸಹೋದರ ವಿನೋದ್ ಅವರು ಮಾಹಿತಿ ನೀಡಿದ್ದಾರೆ.







