ಕುಂಪಲ: ಮನೆಯೊಳಗೆ ನುಗ್ಗಿ ಮಾಲಕನ ಮೇಲೆ ಚೂರಿಯಿಂದ ದಾಳಿ ಮಾಡಿದ ಕಳ್ಳ

ಉಳ್ಳಾಲ,ಮಾ.20: ಕುಂಪಲದ ಪಿಲಾರು ಲಕ್ಷ್ಮೀಗುಡ್ಡೆ ಎಂಬಲ್ಲಿ ಮನೆಯೊಂದಕ್ಕೆ ಕಳ್ಳನೋರ್ವ ನುಗ್ಗಿ ಕಳ್ಳತನಕ್ಕೆ ಯತ್ನಿಸಿ ಮನೆ ಮಾಲಕರಿಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದೆ.
ಕುಂಪಲದ ಸಂಜೀವ ಗಟ್ಟಿ ಎಂಬವರ ಮನೆಯಲ್ಲಿ ಕೃತ್ಯ ನಡೆದಿದೆ. ತಡರಾತ್ರಿ 2ರ ಹೊತ್ತಿಗೆ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳನೋರ್ವ ಮನೆಯೊಳಗೆ ಹುಡುಕಾಡಿದ್ದ. ಅಲ್ಲಿ ಸಿಕ್ಕ ಪರ್ಸನ್ನು ಕಳವುಗೈದ ಕಳ್ಳ ವಾಪಸ್ಸಾಗುವಾಗ ಎಚ್ಚೆತ್ತ ಮನೆ ಮಾಲೀಕ ಸಂಜೀವ ಗಟ್ಟಿಯವರು ತಡೆಯಲು ಮುಂದಾದಾಗ ಕಳ್ಳ ಚೂರಿಯಿಂದ ಅವರಿಗೆ ಇರಿದಿದ್ದಾನೆ. ಬಳಿಕ ಮನೆಯಿಂದ ಓಡಿ ಪರಾರಿಯಾಗಿದ್ದಾನೆ.
ಸಂಜೀವ ಅವರ ಪುತ್ರ ಮನೆಯಲ್ಲಿದ್ದು, ಆತ ಮಲಗಿದ್ದ ಕೋಣೆಗೆ ಕಳ್ಳ ಚಿಲಕ ಹಾಕಿದ್ದನು. ಹಿಂಬದಿಯ ಬಾಗಿಲು ಒಡೆಯುವ ಸಂದರ್ಭವೂ ಕಳ್ಳನ ಕೈಗಳಿಗೆ ಗಾಯವಾಗಿದೆ. ಕಳವುಗೈದ ಖಾಲಿ ಪರ್ಸನ್ನು ರಸ್ತೆ ಮಧ್ಯೆ ಎಸೆದು ಪರಾರಿಯಾಗಿದ್ದಾನೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





