ನಾನು ಮನೆಗೆ ಹಿಂದಿರುಗುತ್ತೇನೆ ಎಂಬ ಭರವಸೆಯಿಲ್ಲ: ಮೆಹುಲ್ ಚೋಕ್ಸಿ

ಹೊಸದಿಲ್ಲಿ, ಮಾ. 19: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆಯ ಸಹ ಆರೋಪಿ ವಜ್ರೋದ್ಯಮಿ ಮೆಹುಲ್ ಚೋಕ್ಸಿ, ವಿವಿಧ ತನಿಖಾ ಸಂಸ್ಥೆಗಳು ‘ಉತ್ರ್ಪೇಕ್ಷಿತ’ ಆರೋಪ ನನ್ನನ್ನು ‘ಸಂಪೂರ್ಣ ರಕ್ಷಣಾರಹಿತ’ ನನ್ನಾಗಿ ಮಾಡಿದೆ ಹಾಗೂ ತಾನು ಸುರಕ್ಷಿತವಾಗಿ ಮನೆಗೆ ಹಿಂದಿರುಗುತ್ತೇನೆ ಎಂಬ ಭರವಸೆಯೇ ಇಲ್ಲದಾಗಿದೆ ಎಂದಿದ್ದಾರೆ.
ಮಾರ್ಚ್ 16ರಂದು ಸಿಬಿಐಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಚೋಕ್ಸಿ, ಡೈಮಂಡ್ ಆರ್ ಅಸ್, ಸ್ಟೆಲ್ಲಾರ್ ಡೈಮಂಡ್ ಹಾಗೂ ಸೋಲಾರ್ ಎಕ್ಸ್‌ಪೋರ್ಟ್‌ನ ಪಾಲುದಾರ ಎಂಬುದನ್ನು ನಿರಾಕರಿಸಿದ್ದಾರೆ. ಈ ಸಂಸ್ಥೆಗಳು ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಗೂ ಚೋಕ್ಸಿ ಸೋದರಳಿಯ ನೀರವ್ ಮೋದಿಯ ಮಾಲಕತ್ವದ ಫೈರ್‌ಸ್ಟಾರ್ ಇಂಟರ್‌ನ್ಯಾಶನಲ್ ಹಾಗೂ ಫೈರ್‌ಸ್ಟಾರ್ ಡೈಮಂಡ್ ಇಂಟರ್‌ನ್ಯಾಶನಲ್‌ನೊಂದಿಗೆ ವಂಚನೆಯ ವಹಿವಾಟು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.
ಫೆಬ್ರವರಿ 14ರಂದು ದಾಖಲಿಸಲಾದ ಹೆಚ್ಚುವರಿ ಪ್ರಥಮ ಮಾಹಿತಿ ವರದಿಯಲ್ಲಿ ಸಿಬಿಐ ಈ ಕಂಪೆನಿಗಳ ಹೆಸರನ್ನು ಉಲ್ಲೇಖಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸಲು ಮಾರ್ಚ್ 16ರಂದು ಹಾಜರಾಗುವಂತೆ ಸಿಬಿಐ ಚೋಕ್ಸಿಗೆ ನೋಟಿಸು ಜಾರಿ ಮಾಡಿತ್ತು. ತನಗೆ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿರುವ ಚೋಕ್ಸಿ, ತನ್ನ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಹಾಗೂ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ. ‘‘ಪಾಸ್‌ಪೋರ್ಟ್‌ನ ಪ್ರಾದೇಶಿಕ ಕಚೇರಿ (ಮುಂಬೈ) ಇದುವರೆಗೆ ನನ್ನೊಂದಿಗೆ ಸಂವಹನ ನಡೆಸಿಲ್ಲ ಹಾಗೂ ನನ್ನ ಪಾಸ್‌ಪೋರ್ಟ್ ಅಮಾನತುಗೊಳಿಸಲಾಗಿದೆ. ನನಗೆ ನಿಮ್ಮ ಕಚೇರಿಗಳ ಬಗ್ಗೆ ಅಪಾರ ಗೌರವವಿದೆ ಹಾಗೂ ಭಾರತಕ್ಕೆ ಹಿಂದಿರುಗಲು ಯಾವುದೇ ನೆಪ ಹೇಳುವುದಿಲ್ಲ’’ ಎಂದು ಚೋಕ್ಸಿ ಹೇಳಿದ್ದಾರೆ.







