ನನೆಗುದಿಗೆ ಬಿದ್ದ ಮೋದಿ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ ‘ಸ್ಮಾರ್ಟ್ ಸಿಟಿ’
ಸದನ ಸಮಿತಿ ಏನು ಹೇಳುತ್ತದೆ ?

ಕೇಂದ್ರ ಸರಕಾರದ ಪ್ರತಿಕ್ರಿಯೆಯೇನು ?
ಹೊಸದಿಲ್ಲಿ, ಮಾ.20: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಿಗೆ ನಿಗದಿಪಡಿಸಲಾಗಿರುವ ನಿಧಿಯನ್ನು ಸೂಕ್ತವಾಗಿ ಬಳಸಿಕೊಂಡಿಲ್ಲ ಎಂದು ಸಂಸದೀಯ ಸಮಿತಿಯೊಂದರ ವರದಿಯಲ್ಲಿ ತಿಳಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಕುರಿತ ಸಂಸತ್‌ನ ಸ್ಥಾಯಿ ಸಮಿತಿಯ ವರದಿಯ ಪ್ರಕಾರ ಪ್ರಧಾನಿ ಮೋದಿಯವರ ಆರು ಪ್ರಮುಖ ಯೋಜನೆಗಳಿಗೆ ನಿಗದಿಗೊಳಿಸಿರುವ ಸುಮಾರು 36,500 ಕೋಟಿ ರೂಪಾಯಿಗಳಲ್ಲಿ ಕೇವಲ ಶೇ.21ರಷ್ಟು, ಅಂದರೆ ಸುಮಾರು 7824 ಕೋಟಿ ರೂ. ಮಾತ್ರ ವೆಚ್ಚ ಮಾಡಲಾಗಿದೆ. ಮೋದಿ ಅಧ್ಯಕ್ಷರಾಗಿರುವ ‘ಸ್ಮಾರ್ಟ್ ಸಿಟಿ’ ಯೋಜನೆಗೆ ನಿಗದಿಗೊಳಿಸಿರುವ ಮೊತ್ತದಲ್ಲಿ ಕೇವಲ ಶೇ.1.8ರಷ್ಟನ್ನು ಮಾತ್ರ ಬಳಸಲಾಗಿದೆ. ಅಲ್ಲದೆ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ ಹಾಗೂ ಸ್ವಚ್ಛ ಭಾರತ ಯೋಜನೆಯಲ್ಲೂ ನಿಗದಿತ ನಿಧಿಯ ಶೇ.30ಕ್ಕೂ ಕಡಿಮೆ ಮೊತ್ತವನ್ನು ಬಳಸಿಕೊಳ್ಳಲಾಗಿದೆ.
ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ನಿಧಿಯನ್ನು ಬಿಡುಗಡೆಮಾಡಿದ್ದರೂ ಕೇಂದ್ರದ ವಸತಿ ಮತ್ತು ಗ್ರಾಮೀಣ ವ್ಯವಹಾರ ಇಲಾಖೆಯು ಸೂಕ್ತ ಕಾರ್ಯನೀತಿಯನ್ನು ಸ್ಪಷ್ಟಪಡಿಸಿಲ್ಲ. ಆದ್ದರಿಂದ ಎಲ್ಲರಿಗೂ ವಸತಿ ಒದಗಿಸುವ ‘ಆವಾಸ್ ಯೋಜನೆ’, ಬಯಲುಶೌಚ ಮುಕ್ತಗೊಳಿಸುವ ‘ಸ್ವಚ್ಛ ಭಾರತ’ ಯೋಜನೆಗಳ ಅನುಷ್ಠಾನದಲ್ಲಿ ನಿರಾಸಕ್ತಿಯ ಜೊತೆಗೆ ಸೂಕ್ತ ನಿಧಿಯ ಕೊರತೆಯನ್ನು ಎದುರಿಸುತ್ತಿದೆ.
ಒಮ್ಮೆಗೇ ಅದ್ದೂರಿಯಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಅನುಷ್ಠಾನಕ್ಕೆ ಸೂಕ್ತ ಕಾರ್ಯ ನೀತಿಯ ಜೊತೆಗೆ, ನಿಗದಿಯಾಗಿರುವ ನಿಧಿಯನ್ನು ಬಳಸುವ ಬಗ್ಗೆಯೂ ಸ್ಪಷ್ಟತೆ ಇಲ್ಲದೆ ಈ ಯೋಜನೆಗಳು ಸೊರಗಿವೆ ಎಂದು ಬಿಜು ಜನತಾದಳದ ಸಂಸದ , ಸ್ಥಾಯಿ ಸಮಿತಿಯ ಅಧ್ಯಕ್ಷ ಪಿನಾಕಿ ಮಿಶ್ರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆದರೆ ಇದನ್ನು ಸರಕಾರ ನಿರಾಕರಿಸುತ್ತಿದೆ. ವರದಿಯಲ್ಲಿ ಉಲ್ಲೇಖಿಸಿರುವ ಸಣ್ಣ ಮೊತ್ತದಲ್ಲಿ ಮುಕ್ತಾಯ ಹಂತದಲ್ಲಿರುವ ಕಾಮಗಾರಿಯನ್ನು ಸೇರಿಸಲಾಗಿಲ್ಲ. ಕಾಮಗಾರಿ ಸಂಪೂರ್ಣಗೊಂಡ ಬಳಿಕವಷ್ಟೇ ಅದನ್ನು ಖರ್ಚಾದ ನಿಧಿ ಎಂದು ಅಧಿಕೃತಗೊಳಿಸಲಾಗುತ್ತದೆ. ಯೋಜನೆಯ ವ್ಯವಸ್ಥಾಪಕರು ನೀಡುವ ‘ಬಳಕೆ ಪ್ರಮಾಣಪತ್ರ’ವು ಹಣ ಖರ್ಚು ಮಾಡಿರುವುದಕ್ಕೆ ಪುರಾವೆಯಾಗಿದೆ. ಯೋಜನೆಯ ಕಾಮಗಾರಿಯ ಹೊಣೆ ಹೊತ್ತಿರುವ ಸಂಸ್ಥೆಯು ಕಾಮಗಾರಿ ಸಂಪೂರ್ಣಗೊಳಿಸಿದ ಬಳಿಕಷ್ಟೇ ಅವರಿಗೆ ಹಣ ಪಾವತಿಸಲಾಗುತ್ತದೆ. ಆದ್ದರಿಂದ ವರದಿಯಲ್ಲಿ ನೀಡಿರುವ ಅಂಕಿಅಂಶವನ್ನು ಕಾಮಗಾರಿ ಮಾಡಿರುವ ಮೊತ್ತ ಎಂದು ಹೇಳುವಂತಿಲ್ಲ . ಇದುವರೆಗೆ ಯೋಜನೆಗಾಗಿ ಸುಮಾರು 24,124 ಕೋಟಿ ರೂ. ಮೊತ್ತದ ಕಾಮಗಾರಿ ನಡೆದಿದೆ ಎಂದು ವಸತಿ ಮತ್ತು ಗ್ರಾಮೀಣ ವ್ಯವಹಾರ ಇಲಾಖೆಯ ವಕ್ತಾರ ರಾಜೀವ್ ಜೈನ್ ತಿಳಿಸಿದ್ದಾರೆ.
ಸೂಕ್ತ ನಿಧಿಯನ್ನು ಒದಗಿಸದಿದ್ದರೆ ಮೋದಿಯವರ ಸದುದ್ದೇಶದ ಯೋಜನೆಗಳು ಕೇವಲ ಕನಸಾಗಿಯೇ ಉಳಿಯಲಿದೆ ಎಂದು ಸಂಸದೀಯ ಸಮಿತಿಯ ವರದಿ ಎಚ್ಚರಿಸಿದೆ.
ಭಾರತದಂತಹ ರಾಷ್ಟ್ರಗಳಲ್ಲಿ ಕೇಂದ್ರ ಸರಕಾರವು ರಾಜ್ಯ ಸರಕಾರಗಳೊಡನೆ ಸಹಕರಿಸುವ ಅಗತ್ಯವಿದೆ. ‘ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತ’ ಮುಂತಾದ ರಾಷ್ಟ್ರೀಯ ಪರಿವರ್ತನೆಯ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಸಮಯದ ಅಗತ್ಯವಿದೆ. ಶೌಚಾಲಯ ಬಳಸಿ ಎಂದು ಪ್ರಜೆಗಳ ಮೇಲೆ ಅಧಿಕಾರ ಚಲಾಯಿಸುವಂತಿಲ್ಲ. ಅವರ ಮನವೊಲಿಸಬೇಕು ಮತ್ತು ಇದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ ಎಂದು ದಿಲ್ಲಿಯ ಐಐಟಿಯ ಪ್ರೊಫೆಸರ್ ಜೈಜಿತ್ ಭಟ್ಟಾಚಾರ್ಯ ಹೇಳಿದ್ದಾರೆ. ಅಲ್ಲದೆ ಪ್ರಾಮಾಣಿಕ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳ್ಳಲು ಸರಕಾರಿ ಯಂತ್ರ ಪ್ರಯತ್ನ ಪಡಬೇಕು. ಯೋಜನೆಗಳು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಂಡಿವೆಯೇ ಎಂದು ನಿರ್ಧರಿಸಲು ಇದು ಸಕಾಲವಲ್ಲ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.







