ಟಾಗೋರ್ ಪ್ರತಿಮೆ ಸ್ಥಳಾಂತರ: ಸೂಕ್ತ ಸ್ಥಳದಲ್ಲಿ ಸಂರಕ್ಷಣೆಗೆ ಕ್ರಮ

ಕಾರವಾರ, ಮಾ.20: 25 ವರ್ಷಗಳ ಹಿಂದೆ ನಗರದ ಕಡಲತೀರದಲ್ಲಿ ಸ್ಥಾಪಿಸಲಾದ ಕವಿ ರವೀಂದ್ರನಾಥ ಟಾಗೋರ್ ಅವರ ಪ್ರತಿಮೆಯನ್ನು ಚತುಷ್ಪಥ ಹೆದ್ದಾರಿಯ ಅಗಲೀಕರಣ ಕಾಮಗಾರಿಗಾಗಿ ತೆರವುಗೊಳಿಸಲಾಗಿದ್ದು ಅದನ್ನು ಸೂಕ್ತ ಸ್ಥಳದಲ್ಲಿ ಸಂರಕ್ಷಿಸಿಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು ಕರಾವಳಿ ಪ್ರವೇಶದ್ವಾರ ಹಾಗೂ ಟಾಗೋರ್ ಪ್ರತಿಮೆಯನ್ನು ತೆರವುಗೊಳಿಸಬೇಕಾಗಿತ್ತು. ಸೋಮವಾರ ಅಧಿಕಾರಿಗಳು ಕ್ರೇನ್ ಬಳಸಿ ಪ್ರತಿಮೆಯನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದರು.
ಪ್ರತಿಮೆಯನ್ನು ವರ್ಗಾವಣೆ ಮಾಡಿರುವ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಪ್ರತಿಮೆಯನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗುತ್ತದೆ. ನೂತನ ಪ್ರವೇಶ ದ್ವಾರದ ನಿರ್ಮಾಣದ ಬಳಿಕ ಪುನಃ ಅದನ್ನು ಸ್ಥಾಪಿಸಲಾಗುವುದು. ಟಾಗೋರ್ ಕಡಲತೀರದಲ್ಲಿ 2 ಮುಖ್ಯ ದ್ವಾರಗಳನ್ನು ನಿರ್ಮಿಸಲು 14.05 ಲಕ್ಷ ರೂ. ಟೆಂಡರ್ ಆಗಿದ್ದು ಶೀಘ್ರದಲ್ಲೇ ನಿರ್ಮಾಣ ಕಾಮಗಾರಿ ನಡೆಯಲಿದೆ. ಮಯೂರವರ್ಮ ವೇದಿಕೆಯ ಹಿಂಭಾಗದಲ್ಲಿ ಮುಖ್ಯ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗುತ್ತದೆ. ಹಾಗೇ ಮೊದಲಿದ್ದ ಜಾಗದಲ್ಲಿಯೇ ರಸ್ತೆಯ ಬದಿಗೆ ಇನ್ನೊಂದು ಮಹಾದ್ವಾರ ನಿರ್ಮಾಣ ಮಾಡಲಾಗುತ್ತದೆ ಎಂದರು.
ಭಾರತದ ಮೊದಲ ಸಿವಿಲ್ ಸರ್ವಿಸ್(ಐಸಿಎಸ್) ಅಧಿಕಾರಿಯಾದ ಸತ್ಯೇಂದ್ರನಾಥ ಟಾಗೋರ್ ಅವರು ಕಾರವಾರದಲ್ಲಿ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಅವರು ಪ್ರಸ್ತುತ ಜಿಲ್ಲಾಧಿಕಾರಿ ವಾಸ್ತವ್ಯದ ಬಂಗಲೆಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಕೆಲವು ದಿನಗಳವರೆಗೆ ಅವರ ಸಹೋದರ ಕವಿ ರವೀಂದ್ರನಾಥ ಟಾಗೋರ್ ಇಲ್ಲಿಯೇ ವಾಸ್ತವ್ಯ ಮಾಡಿದ್ದರು. ಈ ಬಂಗಲೆಯನ್ನು 1864ರಲ್ಲಿ ನಿರ್ಮಿಸಲಾಗಿದ್ದು ಜಿಲ್ಲೆಯ ಆಡಳಿತವು ಅದನ್ನು ಸಂರಕ್ಷಿಸುತ್ತದೆ. ಬಂಗಲೆಯಲ್ಲಿ ಟಾಗೋರ್‌ರು ಉಳಿದುಕೊಂಡ ನೆನಪಿಗಾಗಿ ಅವರ ಕೆಲವು ಬರಹಗಳನ್ನು ನೆನಪಿಗಾಗಿ ಇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಡಲ ತೀರಕ್ಕೆ ಸಾಗುವ ಮಹಾದ್ವಾರದಲ್ಲಿ ಅಳವಡಿಸಲಾಗಿದ್ದ ಕವಿ ಟಾಗೋರ್ರ ಪ್ರತಿಮೆಯು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಪಂಚಲೋಹ ಬಳಸಿ ಈ ಪ್ರತಿಮೆಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ತಯಾರಿಸಲಾಗಿದೆ. ಕಾರವಾರ ಕಡಲ ತೀರವನ್ನು ರವೀಂದ್ರನಾಥ್ ಟಾಗೋರ್ ಹೆಸರಿನಲ್ಲಿ ನಾಮಕರಣ ಮಾಡಿದ ಬಳಿಕ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಕವಿ ರವೀಂದ್ರನಾಥ ಟಾಗೋರ್ ಅವರು 1882ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ಕಾರವಾರಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆಗಿದ್ದ ಅವರ ಸಹೋದರ ಸತ್ಯೇಂದ್ರನಾಥ್ ಟಾಗೋರ್ ಅವರೊಂದಿಗೆ ಕೆಲವು ದಿನ ವಾಸ್ತವ್ಯ ಮಾಡಿದ್ದರು. ಈ ವೇಳೆ ಇಲ್ಲಿನ ಕಡಲತೀರದ ಸೌಂದರ್ಯವನ್ನು ಕಂಡು ಆಕರ್ಷಿತರಾಗಿದ್ದರು. ಇಲ್ಲಿನ ಸೌಂದರ್ಯ ರಾಶಿಯನ್ನು ಹಾಡಿ ಹೊಗಳಿ ಕವಿತೆಯನ್ನು ಬರೆದಿದ್ದರು. ಹೀಗಾಗಿ ಅವರ ಹೆಸರನ್ನು ಕಡಲತೀರಕ್ಕೆ ನಾಮಕರಣ ಮಾಡಲಾಗಿದೆ.
ಕವಿ ರವೀಂದ್ರನಾಥ ಟಾಗೋರ್‌ರು ಜಿಲ್ಲಾಧಿಕಾರಿ ಬಂಗಲೆಯಲ್ಲಿಯೇ ಕೆಲವು ದಿನ ಉಳಿದು ಇಲ್ಲಿನ ಸೌಂದರ್ಯದ ಬಗ್ಗೆ ಹೊಗಳಿದ್ದರು. ಅವರು ಉಳಿದುಕೊಂಡ ಬಂಗಲೆಯಲ್ಲಿಯೇ ಈಗ ತಾನು ಕೂಡ ವಾಸ್ತವ್ಯ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದ್ದು, ಅವರ ಮೇಲೆ ಅಭಿಮಾನವಿದೆ.
ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ







