ಅಳುತ್ತಿದ್ದ ಮಗುವನ್ನು ಮಡಿಲಲ್ಲಿ ಮಲಗಿಸಿ ವಿವಿ ಪ್ರವೇಶ ಪರೀಕ್ಷೆ ಬರೆದ ಮಹಿಳೆ: ಫೋಟೊ ವೈರಲ್

ಕಾಬುಲ್,ಮಾ.21: ತನ್ನ ಪುಟ್ಟ ಮಗುವನ್ನು ತೊಡೆಯಲ್ಲಿ ಮಲಗಿಸಿ ಅಫ್ಘಾನಿಸ್ತಾನದ ಮಹಿಳೆಯೊಬ್ಬಳು ವಿಶ್ವವಿದ್ಯಾಲಯ ಪ್ರವೇಶಾತಿ ಪರೀಕ್ಷೆ ಬರೆಯುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ಭಾರೀ ಸುದ್ದಿ ಮಾಡಿದೆ. 25 ವರ್ಷದ ಜಹಾನ್ ತಾಬ್ ದಾಯ್ಕುಂಡಿ ಪ್ರಾಂತ್ಯದ ಖಾಸಗಿ ವಿವಿಯೊಂದರಲ್ಲಿ ನೆಲದಲ್ಲಿ ಕುಳಿತುಕೊಂಡು ಪರೀಕ್ಷೆ ಬರೆಯುತ್ತಿರುವ ಫೋಟೋವನ್ನು ಯಾರೋ ಕ್ಲಿಕ್ಕಿಸಿದ್ದು ಇದು ಎಲ್ಲರನ್ನು ಆಕರ್ಷಿಸುತ್ತಿದೆ.
ಸಾಮಾಜಿಕ ವಿಜ್ಞಾನ ಕೋರ್ಸ್ ಪ್ರವೇಶ ಪರೀಕ್ಷೆಯಾದ ಕನ್ಕೋರ್ ಪರೀಕ್ಷೆಯನ್ನು ಆಕೆ ನಿಲ್ಲಿ ನಗರದ ನಸಿರ್‍ಖೊಸ್ರವ್ ಹೈಯರ್ ಎಜುಕೇಶನ್ ಸಂಸ್ಥೆಯಲ್ಲಿ ಬರೆಯುತ್ತಿದ್ದಾಗ ಆಕೆಯ ಎರಡು ತಿಂಗಳ ಮಗು ಜೋರಾಗಿ ಕೂಗಲಾರಂಭಿಸಿತ್ತು.
ಕೂಡಲೇ ತಾನು ಕುಳಿತಿದ್ದ ಬೆಂಚಿನಿಂದ ಮೇಲೆದ್ದ ಆಕೆ ನೆಲದಲ್ಲಿ ಕುಳಿತು ಮಗುವನ್ನು ರಮಿಸುತ್ತಾ ಪರೀಕ್ಷೆ ಬರೆಯುವುದನ್ನು ಮುಂದುವರಿಸಿದ್ದಾಳೆ. ಇದನ್ನು ಗಮನಿಸಿದ ಪ್ರಾಧ್ಯಾಪಕಿ ಯಾಹ್ಯಾ ಎರ್ಫಾನ್ ಕೆಲ ಫೋಟೋಗಳನ್ನು ತೆಗೆದಿದ್ದು ನಂತರ ಅದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.
ಮೂಲ ಪೋಸ್ಟ್ ಡಿಲೀಟ್ ಮಾಡಲಾಗಿದೆಯಾದರೂ ಅಷ್ಟೊತ್ತಿಗಾಗಲೇ ಅದನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.
ಯುವತಿಯ ಕಾರ್ಯ ಸ್ಫೂರ್ತಿದಾಯಕ ಎಂದು ಹಲವರು ಹೇಳಿದರೆ ಇನ್ನು ಕೆಲವರು "ಅಫ್ಘಾನ್ ವಿಮೆನ್ ಆರ್ ಅನ್‍ಸ್ಟಾಪೇಬಲ್'' ಎಂದು ಉದ್ಗರಿಸಿದ್ದಾರೆ.







