ರಾಹುಲ್ ಗಾಂಧಿಯ ಭೇಟಿಯಿಂದ ಪಕ್ಷಕ್ಕೆ ಬಲ: ಸಚಿವ ಖಾದರ್

ಮಂಗಳೂರು, ಮಾ.21: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ದ.ಕ.ಜಿಲ್ಲಾ ಪ್ರವಾಸದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ ಪಕ್ಷದ 7 ಶಾಸಕರಿದ್ದಾರೆ. ಮುಂದಿನ ಚುನಾವಣೆಯಲ್ಲಿ 8 ಸ್ಥಾನವನ್ನು ಗೆಲ್ಲುವ ವಿಶ್ವಾಸವಿದೆ. ರಾಹುಲ್ ಗಾಂಧಿಯ ಪ್ರವಾಸದಿಂದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಮಂಗಳವಾರ ನಡೆದ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ಉದ್ಘಾಟನೆ: ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ತೆರೆಯಲಾದ ಇಂದಿರಾ ಕ್ಯಾಂಟೀನನ್ನು ಮಾ.22ರಂದು ಸಂಜೆ 4:30ಕ್ಕೆ ಉದ್ಘಾಟಿ ಸಲಾಗುವುದು. ಗ್ರಾಹಕರ ಬೇಡಿಕೆಯನ್ನು ಮನ್ನಿಸಿ ಕ್ಯಾಂಟೀನ್‌ನ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗಿನ ತಿಂಡಿಯ ಸಮಯದಲ್ಲೂ ಬದ ಲಾವಣೆ ಮಾಡಲಾಗಿದೆ ಎಂದರು.
ಕ್ಷಮೆಯಾಚನೆ: ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರು ಮಾಧ್ಯಮದವರಿಗೆ ತೊಂದರೆ ನೀಡಿರುವ ಬಗ್ಗೆ ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್ ಯಾರಿಂದಲೇ ಆಗಲಿ, ಇಂತಹ ತೊಂದರೆಯಾಗಬಾರದು. ಇದಕ್ಕಾಗಿ ತಾನು ಕ್ಷಮೆಯಾಚಿಸುತ್ತೇನೆ ಎಂದರು.
ಕ್ರಮಕ್ಕೆ ಸೂಚನೆ: ಉಳ್ಳಾಲದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದು ಸರಿಯಲ್ಲ. ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಅವರು ಸೂಕ್ತ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ ಎಂದು ಪತ್ರಕರ್ತರ ಪ್ರಶ್ನಯೊಂದಕ್ಕೆ ಸಚಿವ ಖಾದರ್ ಉತ್ತರಿಸಿದರು.
ಕರಾವಳಿ ತಟ ರಕ್ಷಣಾ ದಳದಿಂದ ಮಂಗಳೂರಿನಲ್ಲಿ ರಾಷ್ಟ್ರೀಯ ತರಬೇತಿ ಅಕಾಡಮಿಯನ್ನು ಸ್ಥಾಪಿಸಲು 200 ಎಕರೆ ಜಮೀನನ್ನು ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಕರಾವಳಿ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ.ಸಲೀಂ ಉಳ್ಳಾಲ, ಸಿರಾಜ್ ಕಿನ್ಯ, ಮಾಜಿ ಜಿಪಂ ಸದಸ್ಯ ಉಮ್ಮರ್ ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.







