ಜನರಿಗೆ ಕಿರಿಕಿರಿಯ ಯಾತ್ರೆಯಾದ ಜನಾಶೀರ್ವಾದ ಯಾತ್ರೆ: ಪ್ರಕಾಶ್ ಶೆಟ್ಟಿ ಪಾದೆಬೆಟ್ಟು
ಪಡುಬಿದ್ರೆ, ಮಾ. 21: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಯು ಜನರಿಗೆ ಕಿರಿಕಿರಿಯ ಯಾತ್ರೆ ಎಂದು ಬಿಜೆಪಿ ಕಾಪು ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರವಾಸದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಕಡೆಗಳಲ್ಲಿ ವಾಹನಗಳನ್ನು ತಡೆ ಹಿಡಿದದ್ದು, ಪ್ರಯಾಣಿಕರು ಪರದಾಡುವಂತಾಯಿತು. ಆಂಬ್ಯುಲೆನ್ಸ್, ಶಾಲಾ ವಾಹನಗಳನ್ನು ಕೂಡ ತಡೆ ಹಿಡಿದಿದ್ದರಿಂದಾಗಿ ಅವರು ಕೂಡ ತೊಂದರೆ ಅನುಭವಿಸಬೇಕಾಯಿತು ಎಂದು ಅವರು ಹೇಳಿದರು.
ವಯಸ್ಕರು, ಕಚೇರಿಗಳಿಗೆ ತೆರಳುವ ಕೆಲಸಗಾರರು ಎಲ್ಲರೂ ಕೂಡಾ ರಾಹುಲ್ ಗಾಂಧಿಗೆ ಹಿಡಿ ಶಾಪ ಹಾಕಿಕೊಂಡೆ ತೆರಳಿದರು. ದೂರದ ಊರಿಂದ ಬರುವ ಸರಕು ವಾಹನಗಳನ್ನು ಗಂಟೆಗಟ್ಟಲೆ ತಡೆ ಹಿಡಿದಿದ್ದರಿಂದ ಅವರ ಸಮಯ ಕೂಡಾ ವ್ಯರ್ಥವಾಯಿತು. ಇನ್ನು ಮುಂದಾದರೂ ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರ ಭೇಟಿ ಇದ್ದಾಗ ಪೊಲೀಸರು ಸುಗಮ ಸಂಚಾರ ವ್ಯವಸ್ಥೆ ಮಾಡಬೇಕಾಗಿ ಕಾಪು ಬಿಜೆಪಿ ಆಗ್ರಹಿಸಿದೆ ಎಂದರು.
Next Story





