ಸಿ.ಟಿ.ರವಿಯ ಮತ್ತೊಂದು ಹೆಸರು ಲೂಟಿ ರವಿ: ಸಿ.ಎಂ ಸಿದ್ದರಾಮಯ್ಯ
ಚಿಕ್ಕಮಗಳೂರಿನಲ್ಲಿ ಜನಾಶೀರ್ವಾದ ಸಮಾವೇಶ

ಚಿಕ್ಕಮಗಳೂರು, ಮಾ.21: ದತ್ತ ಪೀಠದ ವಿಚಾರದಲ್ಲಿ ರಾಜಕೀಯ ಲಾಭ ಪಡೆದ ಸಿ.ಟಿ.ರವಿಗೆ ಮತ್ತೊಂದು ಹೆಸರಿದೆ. ಅದು ಲೂಟಿ ರವಿ. ಇದನ್ನು ನಾನು ಹೇಳುತ್ತಿಲ್ಲ. ಈ ಕ್ಷೇತ್ರದ ಜನತೆ ಕರೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ನಗರದ ಜಿಲ್ಲಾ ಆಟದ ಮೈದಾನ ದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು,ಸಿ.ಟಿ ರವಿಯಂತಹ ಡೋಂಗಿ ರಾಜಕಾರಣಿಗಳನ್ನು ಮುಂದಿನ ಚುನಾವಣೆಯಲ್ಲಿ ಜನತೆ ತಿರಸ್ಕರಿಸಬೇಕು. ಅದು ಚಿಕ್ಕಮಗಳೂರಿನಿಂದ ಆರಂಭಗೊಂಡು ರಾಜ್ಯವ್ಯಾಪಿ ಹರಡಬೇಕು. ಈ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಂತಾಗಬೇಕು, ಬಾಬಾಬುಡನ್‍ಗಿರಿ ಕೋಮುಸೌಹಾರ್ದತೆಗೆ ಹೆಸರಾಗಿತ್ತು. ಆದರೆ ಸಣ್ಣ ವಿಚಾರವನ್ನು ದೊಡ್ಡದು ಮಾಡಿ ಅದನ್ನೊಂದು ವಿವಾದಿತ ಕೇಂದ್ರವಾಗಿಸಿ ಜನರ ಮಧ್ಯೆ ವಿಷ ಬೀಜ ಬಿತ್ತಿ, ವಿಷಜ್ವಾಲೆ ಹರಡಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಜಿಲ್ಲೆಯ ಐದೂ ಕ್ಷೇತ್ರಗಳಲ್ಲೂ ಗೆಲ್ಲಬೇಕು ಎಂದರು.
ಕೋಮುವಾದದ ರಾಜಕಾರಣ ಬಹಳ ದಿನ ಉಳಿಯುವುದಿಲ್ಲ. ಅಂತಹ ರಾಜಕಾರಣ ಜನತೆಗೆ ಅರ್ಥವಾಗಿದೆ. ಸತ್ತ ಹೆಣದ ಮೇಲೆ ರಾಜಕಾರಣ ಮಾಡುವ ಬಿಜೆಪಿಗೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ ಅವರು, ಸತ್ತವರ ಬಗ್ಗೆ ಅನುಕಂಪವಿರಬೇಕು. ಮೃತಪಟ್ಟವರ ಕುಟುಂಬಕ್ಕೆ ಸಾಂತ್ವಾನ ಹೇಳಬೇಕು. ಆದರೆ ಬಿಜೆಪಿ ಅಂತಹ ಮಾನವೀಯತೆ ತೋರುವ ಬದಲು ಸತ್ತವರ ಹೆಣದ ಮೇಲೆ ರಾಜಕಾರಣ ಮಾಡುತ್ತಾರೆ. ಅವರಿಗೆ ಮಾನ ಮರ್ಯಾದೆಯಿಲ್ಲ. ಅಂತವರನ್ನು ಜನತೆ ತಿರಸ್ಕರಿಸಬೇಕೆಂದ ಅವರು, ನಮಗೆ ದರ್ಗಾ, ದತ್ತಾತ್ರೇಯ ಪೀಠದ ಬಗ್ಗೆ ಸಮಾನ ಗೌರವವಿದೆ. ಇಡೀ ಸಮಾಜ ಒಂದು ತಾಯಿ ಮಕ್ಕಳಂತೆ ಇರಬೇಕೆಂದು ಬಯಸುವವರು ನಾವು. ಸೂಫಿಗಳು, ಯತಿಗಳನ್ನು ಸಮಾನವಾಗಿ ಕಾಣುವವರು ನಾವು. ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿ ಕಟ್ಟಿ ರಾಜಕಾರಣಮಾಡುವ ಕೆಲಸವನ್ನು ಕಾಂಗ್ರೆಸ್ ಹಿಂದೆ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಕಾಂಗ್ರೆಸ್ ಮತಯಾಚಿಸುವುದು ಅಭಿವೃದ್ಧಿ ಆಧಾರದಲ್ಲಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಸ್ಥಾನವಿದೆ. 1977ರ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಬಡವರು, ಕಾರ್ಮಿಕರು, ಶೋಷಿತರು, ಮಹಿಳೆಯರ ಪರವಾಗಿದ್ದ ಇಂದಿರಾಗಾಂಧಿ ಅವರು ಸೋಲು ಕಂಡಾಗ 1978ರಲ್ಲಿ ರಾಜಕೀಯ ಶಕ್ತಿ ನೀಡಿದ್ದು ಇಲ್ಲಿಯ ಜನತೆ. ಅದರ ಪರಿಣಾಮ 1980ರಲ್ಲಿ ಅವರು ಮತ್ತೆ ಈ ದೇಶದ ಪ್ರಧಾನ ಮಂತ್ರಿಯಾಗುವಂತಾಯಿತು. ಚಿಕ್ಕಮಗಳೂರು ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದರಲ್ಲದೆ ಮುಂದಿನ ಚುನಾವಣೆಯಲ್ಲಿ ಅಂತಹ ವೈಭವ ಮರುಕಳಿಸಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷ ಹತ್ತು ತಿಂಗಳ ಕಾಲದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಬಡವರು, ಶೋಷಿತರು, ರೈತರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳ ಪರವಾದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತಲುಪಿಸಿ ಜನತೆಗೆ ಮನವರಿಕೆ ಮಾಡಿಕೊಡಬೇಕೆಂದ ಅವರು, ಹಾಗಾದರೆ ಮಾತ್ರ ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವೆಂದು ಹೇಳಿದರು.
ಬಿಜೆಪಿಯವರು ನಮ್ಮ ಕಾರ್ಯ ಕ್ರಮಗಳ ಬಗ್ಗೆ ಗೇಲಿ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಿಂದ ದುಡಿಯುವ ಕುಟುಂಬಗಳನ್ನು ಸೋಮಾರಿಗಳನ್ನಾಗಿ ಮಾಡಲಾಗಿದೆ ಎಂದು ಟೀಕಿಸುತ್ತಾರೆ. ಸದನದಲ್ಲಿ ಬಿಜೆಪಿ ಶಾಸಕರೋರ್ವರು ನೀವು ಅನ್ನಭಾಗ್ಯ ಯೋಜನೆ ಮೂಲಕ ಪುಕ್ಕಟೆ ಅಕ್ಕಿ ಕೊಡುವುದರಿಂದ ನಮಗೆ ಕೂಲಿಯಾಳುಗಳು ದೊರೆಯುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ಅದಕ್ಕೆ ತಾನು ಉತ್ತರಿಸಿ ಇಷ್ಟು ದಿನ ಅವರು ದುಡಿಯುತ್ತಿದ್ದರು. ನೀವು ಆರಾಮವಾಗಿದ್ದೀರಿ. ಈಗ ಅವರು ಆರಾಮವಾಗಿರಲಿ, ನೀವು ದುಡಿಯಿರಿ ಎಂದು ಹೇಳಿದ್ದಾಗಿ ಸಿದ್ದರಾಮಯ್ಯ ಹೇಳಿದರು.
ಈಗ ಅವರು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಅನ್ನಭಾಗ್ಯಕ್ಕೆ ಅಕ್ಕಿ ಕೊಡುತ್ತಿರುವುದು ತಮ್ಮ ಸರ್ಕಾರ ಎನ್ನುತ್ತಿದ್ದಾರೆ. ಆದರೆ ಆಹಾರ ಹಂಚಿಕೆ ಮಾಡುವ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿದ್ದು ಸೋನಿಯಾಗಾಂಧಿ ಹಾಗೂ ಮನಮೋಹನ್‍ಸಿಂಗ್ ಅವರ ಯುಪಿಎ ಸರಕಾರ. ಜೊತೆಗೆ ಅವರ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರ, ಉತ್ತರಪ್ರದೇಶ, ಹರಿಯಾಣ, ಗುಜರಾತ್ ರಾಜ್ಯಗಳಲ್ಲಿ ಏಕೆ ಬಡವರಿಗೆ ಉಚಿತ ಅಕ್ಕಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಈ ಡೋಂಗಿ ರಾಜಕಾರಣವನ್ನು ಬಿಜೆಪಿ ನಿಲ್ಲಿಸಬೇಕೆಂದು ಹೇಳಿದರು.
ಬಿಜೆಪಿ ಎಂದರೆ ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ವಿರೋಧಪಕ್ಷ ಎಂದು ಟೀಕಿಸಿದ ಸಿದ್ಧರಾಮಯ್ಯ, ರಾಜ್ಯದಲ್ಲಿ ಬಡತನ, ಹಸಿವು, ಗುಡಿಸಲು, ಅಪೌಷ್ಠಿಕತೆ ಕೊರತೆ ಮುಕ್ತ ಹಾಗು ಭಯಮುಕ್ತ ಕರ್ನಾಟಕ ಮಾಡಬೇಕೆಂಬುದು ಕಾಂಗ್ರೆಸ್ ಪಕ್ಷದ ಗುರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಂಸದ ಮಲ್ಲಿಕಾಜುನ ಖರ್ಗೆ, ವೀರಪ್ಪಮೊಯ್ಲಿ, ಸಚಿವ ರೋಶನ್‍ಬೇಗ್, ಮಾಜಿ ಸಚಿವರಾದ ಮೋಟಮ್, ಸಗೀರ್ ಅಹ್ಮದ್, ಡಿ.ಕೆ.ತರಾದೇವಿ, ಬಿ.ಎಲ್.ಶಂಕರ್, ಮೊಹಿಯುದ್ದೀನ್, ಎ.ಎನ್.ಮಹೇಶ್, ಎಂ.ಎಲ್.ಮೂರ್ತಿ, ಶಾಸಕ ಶ್ರೀನಿವಾಸ್, ಟಿ.ಡಿ.ರಾಜೇಗೌಡ, ಸಚಿನ್‍ಮೀಗಾ, ವಿಷೂನಾಥನ್ ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.







