ಅವಿಶ್ವಾಸ ಸೂಚನೆಗಳನ್ನು ಕೈಗತ್ತಿಕೊಳ್ಳದ ಲೋಕಸಭೆ,ಚರ್ಚೆಗೆ ಸಿದ್ಧವೆಂದ ಸರಕಾರ

ಹೊಸದಿಲ್ಲಿ,ಮಾ.21: ವಿವಿಧ ಪಕ್ಷಗಳ ಸದಸ್ಯರಿಂದ ಕೋಲಾಹಲ ಪೂರ್ಣ ಪ್ರತಿಭಟನೆಗಳಿಂದಾಗಿ ಬುಧವಾರ ಕಲಾಪದಲ್ಲಿ ವ್ಯತ್ಯಯ ದಿಂದಾಗಿ ಲೋಕಸಭೆಯು ಮುಂದೂಡಲ್ಪಟ್ಟಿದ್ದರಿಂದ ಸರಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಸೂಚನೆಗಳನ್ನು ಸದನವು ಕೈಗೆತ್ತಿಕೊಳ್ಳಲಿಲ್ಲ.
ಗದ್ದಲದ ನಡುವೆಯೇ ಗೃಹಸಚಿವ ರಾಜನಾಥ್ ಸಿಂಗ್ ಅವರು, ಅವಿಶ್ವಾಸ ಸೂಚನೆ ಸೇರಿದಂತೆ ಯಾವುದೇ ವಿಷಯದ ಮೇಲೆ ಚರ್ಚೆಗೆ ಸರಕಾರವು ಸಿದ್ಧವಿದೆ ಎಂದು ತಿಳಿಸಿದರು.
ಪ್ರಶ್ನೆವೇಳೆಯು ವ್ಯರ್ಥಗೊಂಡ ಬಳಿಕ ಶೂನ್ಯಕಾಲದ ಕಲಾಪಗಳಿಗಾಗಿ ಸದನವು ಸೇರಿದ ಬೆನ್ನಲ್ಲೇ ಟಿಆರ್‌ಎಸ್ ಮತ್ತು ಎಐಎಡಿಎಂಕೆ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದುಕೊಂಡು ಸದನದ ಅಂಗಳಕ್ಕೆ ನುಗ್ಗಿದರು. ಟಿಆರ್‌ಎಸ್ ಕೋಟಾ ಹೆಚ್ಚಳಕ್ಕಾಗಿ ಆಗ್ರಹಿಸುತ್ತಿದ್ದರೆ, ಕಾವೇರಿ ನದಿ ನಿರ್ವಹಣೆ ಮಂಡಳಿಯ ರಚನೆಗಾಗಿ ಎಐಎಡಿಎಂಕೆ ಪಟ್ಟು ಹಿಡಿದಿತ್ತು.
ಚರ್ಚೆಗೆ ಸರಕಾರವು ಸಿದ್ಧವಿದೆ ಎಂದು ಹೇಳಿದ ಸಿಂಗ್, ಚರ್ಚೆಯನ್ನು ಕೈಗೆತ್ತಿಕೊಳ್ಳಲು ಸಹಕರಿಸುವಂತೆ ಎಲ್ಲ ಪಕ್ಷಗಳನ್ನು ಕೋರಿಕೊಂಡರು.
ತಮ್ಮ ಆಸನಗಳಿಗೆ ಮರಳುವಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪ್ರತಿಭಟನಾನಿರತ ಸದಸ್ಯರಿಗೆ ಪದೇಪದೇ ಮಾಡಿಕೊಂಡ ಮನವಿಗಳು ವಿಫಲಗೊಂಡವು.
ಕೋಲಾಹಲ ಮುಂದುವರಿಯುತ್ತಿದ್ದಂತೆ ಮಹಾಜನ ಅವರು, ಅವಿಶ್ವಾಸ ನಿರ್ಣಯವನ್ನು ಕೈಗೆತ್ತಿಕೊಳ್ಳಲು ತಾನು ಕರ್ತವ್ಯ ಬದ್ಧವಾಗಿದ್ದೇನೆ, ಆದರೆ ಕಲಾಪ ವ್ಯತ್ಯಯದಿಂದಾಗಿ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿ, ದಿನದ ಮಟ್ಟಗೆ ಸದನವನ್ನು ಮುಂದೂಡಿದರು.
ವೈಎಸ್‌ಆರ್ ಕಾಂಗ್ರೆಸ್ ಸದಸ್ಯ ವೈ.ವಿ.ಸುಬ್ಬಾರೆಡ್ಡಿ ಮತ್ತು ಟಿಡಿಪಿ ಸದಸ್ಯರಾದ ಥೋಟ ನರಸಿಂಹಂ ಮತ್ತು ಜಯದೇವ ಗಲ್ಲಾ ಅವರು ಅವಿಶ್ವಾಸ ಸೂಚನೆಗಳನ್ನು ಮಂಡಿಸಿದ್ದಾರೆ. ಉಭಯ ಪಕ್ಷಗಳು ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿವೆ. ಇದರೊಂದಿಗೆ ಸತತ 11ನೇ ದಿನವೂ ಸದನದ ಕಲಾಪಗಳು ವ್ಯರ್ಥವಾಗಿದ್ದು, ಎರಡನೇ ದಿನವೂ ಅವಿಶ್ವಾಸ ಸೂನೆಗಳನ್ನು ಕೈಗೆತ್ತಿಕೊಳ್ಳಲು ಸ್ಪೀಕರ್‌ಗೆ ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಪ್ರಶ್ನೆವೇಳೆಯಲ್ಲಿ ಬ್ಯಾಂಕಿಂಗ್ ಹಗರಣ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಟಿಆರ್‌ಎಸ್ ಮತ್ತು ಎಐಎಡಿಎಂಕೆ ಸದಸ್ಯರ ಪ್ರತಿಭಟನೆ ಗಳಿಂದಾಗಿ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಗಿತ್ತು.







