ಬಿಜೆಪಿ ವಿರೋಧಿ ರಂಗಕ್ಕೆ ಸೇರ್ಪಡೆಗೆ ಮುನ್ನ ಸಿದ್ಧಾಂತ ಸ್ಪಷ್ಟಪಡಿಸಿ: ಎಂಎನ್ಎಸ್ಗೆ ಕಾಂಗ್ರೆಸ್ ಆಗ್ರಹ

ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ
ಮುಂಬೈ, ಮಾ.21: ಬಿಜೆಪಿ ವಿರೋಧಿ ರಂಗಕ್ಕೆ ಸೇರ್ಪಡೆಯಾಗುವ ಯಾವುದೇ ಪ್ರಯತ್ನ ನಡೆಸುವ ಮೊದಲು ಮಹಾರಾಷ್ಟ್ರ ನವನಿರ್ಮಾಣ ಸೇನೆಯು (ಎಂಎನ್ಎಸ್) ತನ್ನ ಸಿದ್ಧಾಂತದ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಾಣಿಕ್ರಾವ್ ಠಾಕ್ರೆ ಹೇಳಿದ್ದಾರೆ. 2019ರ ವೇಳೆಗೆ ‘ಮೋದಿ ಮುಕ್ತ ಭಾರತ’ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಇತ್ತೀಚೆಗೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದು , ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ರಂಗಕ್ಕೆ ಎಂಎನ್ಎಸ್ ಸೇರ್ಪಡೆಗೊಳ್ಳುವ ಮುನ್ಸೂಚನೆ ಇದಾಗಿದೆ ಎಂದು ಭಾವಿಸಲಾಗಿದೆ. ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷದ ನಿಲುವು ಕೂಡಾ ಬದಲಾಗಬೇಕು ಎಂಬುದು ಎಂಎನ್ಎಸ್ ನಿಲುವಾಗಿದೆ.
12 ವರ್ಷದ ಹಿಂದೆ ಶಿವಸೇನೆಯಿಂದ ಹೊರಬಂದು ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿದ ದಿನದಿಂದಲೂ ರಾಜ್ಠಾಕ್ರೆಯವರ ರಾಜಕೀಯ ನಿಲುವಿನಲ್ಲಿ ಸ್ಥಿರತೆಯಿಲ್ಲ ಎಂದು ಮಾಣಿಕ್ರಾವ್ ಠಾಕ್ರೆ ಟೀಕಿಸಿದ್ದಾರೆ. ಇದೀಗ ಪಕ್ಷದ ನಿಲುವು ರಾಷ್ಟ್ರೀಯ ದೃಷ್ಟಿಕೋನ ಹೊಂದಿದೆಯೇ ಅಥವಾ ವಲಸಿಗರ ವಿರುದ್ಧವಾದ ನಿಲುವನ್ನು ಮುಂದುವರಿಸುತ್ತದೆಯೇ ಎಂಬುದನ್ನು ಎಂಎನ್ಎಸ್ ಸ್ಪಷ್ಟಪಡಿಸಬೇಕು. ರಾಜ್ಠಾಕ್ರೆ ಶಿವಸೇನೆ ಮತ್ತು ಬಿಜೆಪಿಯನ್ನು ಟೀಕಿಸುತ್ತಿದ್ದರೂ ಅವರ ಸಿದ್ಧಾಂತ ಈ ಎರಡು ಕೇಸರಿ ಪಕ್ಷಗಳ ಸಿದ್ಧಾಂತಕ್ಕಿಂತ ಭಿನ್ನವಾಗಿಲ್ಲ. ಆದ್ದರಿಂದ ಕಾಂಗ್ರೆಸ್ ನೇತೃತ್ವದ ಬಿಜೆಪಿ ವಿರೋಧಿ ರಂಗದಲ್ಲಿ ಸ್ಥಾನ ಪಡೆಯುವ ಅವರ ನಡೆ ಅವರು ನೀಡುವ ಸ್ಪಷ್ಟನೆಯನ್ನು ಆಧರಿಸಿದೆ ಎಂದು ಮಾಣಿಕ್ರಾವ್ ಹೇಳಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ಪವಾರ್ ಹಾಗೂ ರಾಜ್ ಠಾಕ್ರೆ ಇತ್ತೀಚಿನ ದಿನಗಳಲ್ಲಿ ನಿಕಟಗೊಳ್ಳುತ್ತಿರುವ ಬಗ್ಗೆ ನೇರ ಉತ್ತರ ನೀಡಲು ಅವರು ನಿರಾಕರಿಸಿದರು. ಈ ಮಧ್ಯೆ ಹೇಳಿಕೆ ನೀಡಿರುವ ಎಂಎನ್ಎಸ್ ವಕ್ತಾರ ವಾಗೀಶ್ ಸಾರಸ್ವತ್, ರಾಜಕೀಯ ಪಕ್ಷಗಳು ಸದಾ ಒಂದೇ ನಿಲುವಿಗೆ ಅಂಟಿಕೊಂಡಿರಲು ಸಾಧ್ಯವಿಲ್ಲ ಎಂದಿದ್ದಾರೆ. ಚಾಲ್ತಿಯಲ್ಲಿರುವ ರಾಜಕೀಯ ಸ್ಥಿತಿಗತಿಗೆ ಅನುಗುಣವಾಗಿ ಪಕ್ಷಗಳ ನಿಲುವೂ ಬದಲಾಗುತ್ತದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದಕ್ಕೆ ಸೂಕ್ತ ಉದಾಹರಣೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಶರದ್ ಪವಾರ್ ನೇತೃತ್ವದ, ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾಗಿರುವ ಪ್ರಾದೇಶಿಕ ಪಕ್ಷಗಳ ರಂಗದ ಸದಸ್ಯನಾಗಿರಲು ರಾಜ್ಠಾಕ್ರೆಗೆ ಅಭ್ಯಂತರವಿಲ್ಲ. ಪವಾರ್ ಹೊರತುಪಡಿಸಿದರೆ ಮೋದಿ ಎದುರಿಸಲು ಸಮರ್ಥ ಮುಖಂಡ ಇನ್ನೊಬ್ಬರಿಲ್ಲ ಎಂದು ಎಂಎನ್ಎಸ್ ಹೇಳಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿರುವ ಕಾರಣ ಯಾವುದೇ ತೃತೀಯ ರಂಗಕ್ಕೆ ಸೇರ್ಪಡೆಯಾಗದು. ಆದರೆ ರಾಹುಲ್ ಗಾಂಧಿಯವರ ನಾಯಕತ್ವವನ್ನು ಬಿಜೆಪಿ ಹೊರತಾದ ಪಕ್ಷಗಳು ಒಪ್ಪಿಕೊಳ್ಳಬೇಕು ಎಂಬುದು ಕಾಂಗ್ರೆಸ್ನ ಆಶಯವಾಗಿದೆ. ರಾಹುಲ್ ಗಾಂಧಿಯವರ ನಾಯಕತ್ವವನ್ನು ಬಿಜೆಪಿಯೇತರ ಪಕ್ಷಗಳೆಲ್ಲಾ ಒಪ್ಪಿಕೊಳ್ಳುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಎಂಎನ್ಎಸ್ ಮೂಲಗಳು ತಿಳಿಸಿವೆ.







