ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪೌರ ಕಾರ್ಮಿಕರ ಸೇವೆ ಖಾಯಂ: ಯಡಿಯೂರಪ್ಪ

ಬೆಂಗಳೂರು, ಮಾ.21: ಬಿಬಿಎಂಪಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ 20 ಸಾವಿರಕ್ಕೂ ಅಧಿಕ ಪೌರ ಕಾರ್ಮಿಕರನ್ನು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಖಾಯಂಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಬುಧವಾರ ನಗರದ ಪುರಭವನ ಸಭಾಂಗಣದಲ್ಲಿ ಪೌರ ಕಾರ್ಮಿಕರ ಸಮುದಾಯ ವೇದಿಕೆ ವತಿಯಿಂದ ಆಯೋಜಿಸಿದ್ದ, ಬಿಬಿಎಂಪಿ ಪೌರ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಗರದಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಹೆಚ್ಚಿದೆ. ಹೀಗಾಗಿ, ಹೊರ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಲಾಗುವುದು. ಜೊತೆಗೆ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ದಿನದಂದು ಪೌರ ಕಾರ್ಮಿಕರ ಭತ್ತೆ ನೀಡಲಾಗುವುದು ಎಂದ ಅವರು, ಸರಕಾರ ಉಚಿತ ಶಿಕ್ಷಣ ನೀಡುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಪೌರ ಕಾರ್ಮಿಕರ ಮಕ್ಕಳು, ಶಿಕ್ಷಣ ಪಡೆಯಲು ಮುಂದಾಗಬೇಕು. ಜೊತೆಗೆ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳಾಗಬೇಕು ಎಂದು ಯಡಿಯೂರಪ್ಪ ಹೇಳಿದರು.
ಬಿಜೆಪಿ ಮುಖಂಡ ಲಹರಿ ವೇಲು ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಪೌರ ಕಾರ್ಮಿಕರ ವಾಸಿಸುವ ಸ್ಥಳಗಳಿಗೆ ಸ್ಲಂ-ಕೊಳಗೇರಿ ಎಂದು ಕರೆಯುವುದು ಸರಿಯಲ್ಲ. ಇನ್ನು, ಆಡಳಿತ ನಡೆಸುವ ಸರಕಾರಗಳು ಬಡವರ ಪರವಾಗಿ ದುಡಿಯಬೇಕಾಗಿದೆ ಎಂದರು.
ಬಿಜೆಪಿ ಮುಖಂಡ ಚಿ.ನಾ.ರಾಮು ಮಾತನಾಡಿ, ಪೌರ ಕಾರ್ಮಿಕರು ಇಲ್ಲದಿದ್ದರೆ ಅನೇಕ ರೋಗಗಳು ಹುಟ್ಟುಕೊಳ್ಳಲಿವೆ. ಆದರೆ, ಇದು ಸರಕಾರಕ್ಕೆ ಗೊತ್ತಿದ್ದರೂ, ಪೌರ ಕಾರ್ಮಿಕರ ರಕ್ಷಣೆ, ಮೂಲಸೌಕರ್ಯ ನೀಡುವಲ್ಲಿ ವಿಫಲವಾಗಿದೆ. ಅಲ್ಲದೆ, ಈ ಬಾರಿಯ ಚುನಾವಣೆಯಲ್ಲಿ ಪೌರ ಕಾರ್ಮಿಕರ ಮುಖಂಡರೊಬ್ಬರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.
ವೇದಿಕೆ ಅಧ್ಯಕ್ಷ ಎಂ.ಸುಬ್ಬರಾಯುಡು ಮಾತನಾಡಿ, ಇಪ್ಪತ್ತು ಸಾವಿರಕ್ಕಿಂತಲೂ, ಹೆಚ್ಚಿನ ಸಂಖ್ಯೆಯಲ್ಲಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಹಾಲಿ ಸರಕಾರಿ ಆದೇಶದಂತೆ ನಾಲ್ಕು ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ಹಾಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಜೇಷ್ಠತೆ ಮೇರೆಗೆ ಖಾಯಂಗೊಳಿಸಬೇಕು ಎಂದು ಒತ್ತಾಯ ಮಾಡಿದರು.
ಸಮಾವೇಶದಲ್ಲಿ ಬಿಬಿಎಂಪಿ ಸದಸ್ಯೆ ಶಶಿಕಲಾ, ಬಿಜೆಪಿ ಮುಖಂಡರಾದ ಎನ್.ಆರ್.ರಮೇಶ್, ವಾಸುದೇವನ್, ವೇದಿಕೆಯ ಜಯರಾಮ್, ಎ. ಜೈರೀರಾಮ್, ಎಂ.ಎನ್.ಶ್ರೀರಾಮ್ ಸೇರಿ ಪ್ರಮುಖರಿದ್ದರು.







